ಕೇವಲ 30 ವರ್ಷಕ್ಕೆ ಬರೋಬ್ಬರಿ 9 ಮದುವೆ! 7ನೇ ಗಂಡ ಹೊಸಪೇಟೆ ರಾಜಕಾರಣಿ ವಿರುದ್ಧ ಕ್ರಿಮಿನಲ್ ಕೇಸ್: ಕೌಟುಂಬಿಕ ಕ್ರೌರ್ಯ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬರೋಬ್ಬರಿ 9 ಮದುವೆಗಳಾಗಿವೆ ಎನ್ನಲಾದ 30 ವರ್ಷದ ಮಹಿಳೆಯೊಬ್ಬರು, ತಮ್ಮ 7ನೇ ಪತಿ ಹಾಗೂ ಹೊಸಪೇಟೆಯ ರಾಜಕಾರಣಿ ಹುಸೇನ್ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
High court
ಹೈಕೋರ್ಟ್
Updated on: 

ಬೆಂಗಳೂರು: 30ರ ಹರಯ, 9 ಮದುವೆಯ ಆರೋಪ, 7ನೇ ಗಂಡನ ವಿರುದ್ಧದ ಕ್ರಿಮಿನಲ್ ಕೇಸ್.! ಹೌದು, ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ವಿರುದ್ಧ ಪತ್ನಿ ದಾಖಲಿಸಿದ್ದ ಕೌಟುಂಬಿಕ ಕ್ರೌರ್ಯ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಮದುವೆ, ಜಗಳ, ಕೇಸ್, ರಾಜಿ. ಇದೇ ಮಾದರಿ 9 ಬಾರಿ ಪುನರಾವರ್ತನೆಯಾಗಿದೆ ಎಂಬುದು ಗಂಡನ ಆರೋಪವಾದರೆ, ಪ್ರಮಾಣಪತ್ರಗಳೇ ನಕಲಿ, ತಾವು 4 ಬಾರಿ ಮಾತ್ರ ಮದುವೆಯಾಗಿದ್ದೇವೆ ಎಂಬುದು ಮಹಿಳೆಯ ವಾದ. ಕೋರ್ಟ್ ಯಾರ ಮಾತು ನಂಬಿತು? ಆ ಕುರಿತ ವರದಿ ಇಲ್ಲಿದೆ:

ಪ್ರಕರಣದ ಹಿನ್ನೆಲೆ ಏನು?

ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ಮತ್ತು ಈ 30 ವರ್ಷದ ಮಹಿಳೆ 2022ರ ಜನವರಿ 13ರಂದು ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಮತ ಉಂಟಾಗಿತ್ತು. ಇದರ ತರುವಾಯು ಮಹಿಳೆಯು ತನ್ನ ಪತಿಯ ವಿರುದ್ಧ ವಿವಾಹಿತ ಮಹಿಳೆ ಮೇಲಿನ ಕ್ರೌರ್ಯ (IPC 498A), ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು (IPC 323), ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಉಡುಪಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಹುಸೇನ್ ವಿರುದ್ಧ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು. ಆದರೆ, ಪ್ರಕರಣದ ವಿರುದ್ಧ ಹುಸೇನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಕಾನೂನಿನ ದುರುಪಯೋಗದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಅದರಂತೆ, ರಾಜಕಾರಣಿ ಹುಸೇನ್ ವಿರುದ್ಧ ದಾಖಲಾಗಿರುವ ವರದಕ್ಷಿಣೆ ಕಿರುಕುಳದ ಆರೋಪಗಳು ಮೇಲ್ನೋಟಕ್ಕೆ ಯಾವುದೇ ಭದ್ರ ಬುನಾದಿ ಹೊಂದಿಲ್ಲದ ಸುಳ್ಳು ಆರೋಪಗಳಾಗಿವೆ ಎಂದು ತಿಳಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದಲ್ಲಿದ್ದ ಇಡೀ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಿತು.

High court
ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ: ನೋಟಿಸ್ ನೀಡದೆ 300 ದಾಳಿಂಬೆ ಮರ ಕಡಿದ ತಹಶೀಲ್ದಾರ್‌ಗೆ ಹೈಕೋರ್ಟ್ ತರಾಟೆ

ಇದರೊಂದಿಗೆ, "ಒಂದು ಮದುವೆಯ ಬೆನ್ನಲ್ಲೇ ಮತ್ತೊಂದು ಮದುವೆ, ವಿರಸದ ಬೆನ್ನಲ್ಲೇ ಕೋರ್ಟ್ ಕೇಸ್, ನಂತರ ಹಣದ ಸೆಟಲ್ಮೆಂಟ್, ಆಮೇಲೆ ಮಗದೊಂದು ಮದುವೆ... ಈ ಸರಣಿಯನ್ನು ಗಮನಿಸಿದರೆ ಇದು ಕೇವಲ ಕಾಕತಾಳೀಯವಲ್ಲ. ಹಣಕಾಸಿನ ಲಾಭಕ್ಕಾಗಿ ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸ್ಪಷ್ಟ ಮಾದರಿ ಗೋಚರಿಸುತ್ತದೆ" ಎಂದು ತೀವ್ರವಾಗಿ ಆಕ್ಷೇಪಿಸಿದ ನ್ಯಾಯಾಧೀಶರು, "ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದಾಳೆ ಅಥವಾ ಈ ಹಿಂದೆ ಪತಿಯರ ವಿರುದ್ಧ ಕೇಸ್ ಹಾಕಿದ್ದಾಳೆ ಎಂಬ ಏಕೈಕ ಕಾರಣಕ್ಕೆ ಆಕೆಯ ಚಾರಿತ್ರ್ಯವನ್ನು ದೂಷಿಸುವಂತಿಲ್ಲ ಅಥವಾ ಆಕೆಯ ಮುಂದಿನ ದೂರುಗಳನ್ನು ತಳ್ಳಿಹಾಕುವಂತಿಲ್ಲ. ಆದರೆ, ಈ ನಿರ್ದಿಷ್ಟ ಪ್ರಕರಣದಲ್ಲಿ ಮಹಿಳೆ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲದಿರುವುದು ತನಿಖಾ ವರದಿಗಳಿಂದ ಸಾಬೀತಾಗಿದೆ" ಎಂದು ಹುಸೇನ್ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಕ್ರಿಮಿನಲ್ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ಕೋರ್ಟ್‌ನಲ್ಲಿ ಬಹಿರಂಗವಾದ ಆಘಾತಕಾರಿ ಸತ್ಯ!

ಅರ್ಜಿದಾರರಾದ ಹುಸೇನ್ ಅವರು ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿ, ಈ ಮಹಿಳೆಗೆ ಇದು 7ನೇ ಮದುವೆಯಾಗಿದ್ದು, ಒಟ್ಟು 9 ಮದುವೆಗಳಾಗಿವೆ ಎಂದು ಸಾಬೀತುಪಡಿಸಿದರು. ಇದರೊಂದಿಗೆ, ವಿಚಾರಣೆ ವೇಳೆ ಮಹಿಳೆಯು ತನಗೆ ಒಟ್ಟು 4 ಮದುವೆಗಳಾಗಿವೆ (1, 3, 5 ಮತ್ತು 7ನೇ ಮದುವೆ) ಎಂದು ಒಪ್ಪಿಕೊಂಡಿದ್ದರು. ಆದರೆ ಹುಸೇನ್ ಸಲ್ಲಿಸಿದ ದಾಖಲೆಗಳು ಆಕೆಗೆ 9 ಮದುವೆಗಳಾಗಿರುವುದನ್ನು ಪುಷ್ಟೀಕರಿಸಿದ್ದವು.

High court
ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!

ಮತ್ತೊಂದೆಡೆ, ಮಹಿಳೆಯು ಪ್ರತಿ ಬಾರಿಯೂ ಮದುವೆಯಾಗುವುದು, ಕೆಲವೇ ತಿಂಗಳುಗಳಲ್ಲಿ ಗಂಡಂದಿರ ವಿರುದ್ಧ 498A ಅಡಿ ಕಿರುಕುಳದ ಕೇಸ್ ದಾಖಲಿಸುವುದು, ತದನಂತರ ಅವರಿಂದ ದೊಡ್ಡ ಮೊತ್ತದ ಹಣ/ಜೀವನಾಂಶ ಪಡೆದು ಸೆಟಲ್ಮೆಂಟ್ (ರಾಜಿ) ಮಾಡಿಕೊಂಡು ವಿಚ್ಛೇದನ ಪಡೆಯುವುದನ್ನು ಒಂದು ಹವ್ಯಾಸವಾಗಿಸಿಕೊಂಡಿದ್ದರು ಎಂದು ಪತಿ ಪರ ವಕೀಲರು ವಾದಿಸಿದ್ದರು. ಏತನ್ಮಧ್ಯೆ, ಆಕೆಯ 9ನೇ ಪತಿ ಕೂಡ ಇದೇ ರೀತಿ ತಮಗೆ ಬೆದರಿಕೆ ಹಾಕಿರುವ ಬಗ್ಗೆ ಪ್ರಮಾಣಪತ್ರ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X