

ಬೆಂಗಳೂರು: ಇದೇ ಶನಿವಾರದಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದಲ್ಲಿರುವ ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅನುಮೋದನೆ ನೀಡಿದೆ.
ಈ ಕುರಿತು ನಿನ್ನೆ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಅನುಮೋದನೆ ತಿಳಿಸಲಾಗಿದೆ.
ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ಸುಬ್ದಗುಂಟೆಪಾಳ್ಯ (Suddaguntepalya), ಜೆ.ಪಿ. ನಗರ 4ನೇ ಹಂತದ ನಿಲ್ದಾಣವನ್ನು ಎನ್.ಎಸ್. ಪಾಳ್ಯ (NS Palya) ಹಾಗೂ ಐಐಎಂಬಿ ನಿಲ್ದಾಣವನ್ನು ಬಿಳೇಕಹಳ್ಳಿ–ಐಐಎಂಬಿ (Bilekahalli–IIMB) ಎಂದು ಮರುನಾಮಕರಣ ಮಾಡಲಾಗಿದೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಹೆಸರು ಬದಲಾವಣೆ
ರಾಜ್ಯ ಸರ್ಕಾರದ ಸಮಿತಿಯ ಶಿಫಾರಸು ಹಾಗೂ ಸ್ಥಳೀಯರ ಬೇಡಿಕೆಗಳನ್ನು ಪರಿಗಣಿಸಿ, ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದಲ್ಲಿರುವ ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇದರಂತೆ ಐಐಎಂಬಿ ನಿಲ್ದಾಣವು ಬಿಳೇಕಹಳ್ಳಿ–ಐಐಎಂಬಿ, ಜೆ.ಪಿ. ನಗರ 4ನೇ ಹಂತದ ನಿಲ್ದಾಣವು ಎನ್.ಎಸ್. ಪಾಳ್ಯ–ಜೆ.ಪಿ. ನಗರ 4ನೇ ಹಂತ ಹಾಗೂ ತಾವರೆಕೆರೆ ನಿಲ್ದಾಣವು ಎಸ್.ಜಿ. ಪಾಳ್ಯ (ಸುಬ್ದಗುಂಟೆ ಪಾಳ್ಯ) ಎಂದು ಮರುನಾಮಕರಣಗೊಳ್ಳಲಿದೆ.
ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ಸತೀಶ್ ರೆಡ್ಡಿ ಮತ್ತು ಉದಯ್ ಗರುಡಾಚಾರ್ ಅವರ ಉಪಸ್ಥಿತಿಯಲ್ಲಿ ಈ ಹೆಸರು ಬದಲಾವಣೆಗಳನ್ನು ಅಂತಿಮಗೊಳಿಸಲಾಗಿದೆ.
ಕಾಳೇನ ಅಗ್ರಹಾರದಿಂದ ಹಿಂದಿನ ತಾವರೆಕೆರೆ ನಿಲ್ದಾಣದವರೆಗಿನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ. ಈ ಮಾರ್ಗದಲ್ಲಿರುವ ಉಳಿದ ಮೆಟ್ರೋ ನಿಲ್ದಾಣಗಳ ಹೆಸರುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.