ದೀಪಾವಳಿ ಪಟಾಕಿ ಅವಘಡಕ್ಕೆ ಬೆಂಗಳೂರಿನಲ್ಲಿ 200 ಮಂದಿ ಗಾಯ; ಮೂವರಿಗೆ ಶಸ್ತ್ರಚಿಕಿತ್ಸೆ, ಗರ್ಭಿಣಿಯ ಸ್ಥಿತಿ ಚಿಂತಾಜನಕ..!

ಇವರಲ್ಲಿ 21 ವರ್ಷದ ಗರ್ಭಿಣಿಯೊಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರು ಕುಳಿತಿದ್ದ ಸ್ಥಳದ ಪಕ್ಕದಲ್ಲಿದ್ದ ಪಟಾಕಿ ಪೆಟ್ಟಿಗೆಗೆ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ.
A woman lights up sparklers to celebrate Deepavali on Sunday night
ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿರುವ ಮಹಿಳೆ.
Updated on: 

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅವಘಡಗಳಿಂದ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಮಂದಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.

ಗಾಯಾಳುಗಳಲ್ಲಿ ಕಣ್ಣಿಗೆ ಗಂಭೀರ ಗಾಯಗಳಾಗಿರುವವರು ಹಾಗೂ ಸುಟ್ಟ ಗಾಯಗಳಿಂದ ಬಳಲುತ್ತಿರುವವರೂ ಸೇರಿದ್ದಾರೆ.

ಇವರಲ್ಲಿ 21 ವರ್ಷದ ಗರ್ಭಿಣಿಯೊಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರು ಕುಳಿತಿದ್ದ ಸ್ಥಳದ ಪಕ್ಕದಲ್ಲಿದ್ದ ಪಟಾಕಿ ಪೆಟ್ಟಿಗೆಗೆ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಸದ್ಯ ಅವರು ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಟಾಕಿಯಿಂದ ಸುಟ್ಟ ಗಾಯಗಳಾದ ಎಂಟು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಆರು ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಿಕೊಳ್ಳಲಾಗಿದೆ. ಗಾಯಗಳ ಪ್ರಮಾಣ ಶೇ.10ರಿಂದ ಶೇ.25ರಷ್ಟಿದ್ದು, ಉಳಿದ ಇಬ್ಬರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ದಾಖಲಾದ ಆರು ಮಂದಿಯ ಆರೋಗ್ಯ ಸ್ಥಿರವಾಗಿದ್ದರೂ, ದ್ವಿತೀಯ ಹಂತದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ವೈದ್ಯರು ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಚ್.ಎಲ್. ವಿಶ್ವನಾಥ್ ತಿಳಿಸಿದ್ದಾರೆ.

ನವೆಂಬರ್ 6ರಿಂದ 10ರವರೆಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯಗೊಂಡ 44 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

A woman lights up sparklers to celebrate Deepavali on Sunday night
ದೀಪಾವಳಿ ಸಂಜೆ ಎಷ್ಟು ದೀಪ ಬೆಳಗಿಸಬೇಕು? ಪಂಚಮುಖಿ ದೀಪದ ವಿಶೇಷತೆ ಏನು; ದೀಪಕ್ಕೆ ಎಣ್ಣೆ ಉತ್ತಮವೋ ಅಥವಾ ತುಪ್ಪವೊ?

ಈ ಪೈಕಿ 28 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದು, 16 ಪ್ರಕರಣಗಳು ಸಾಮಾನ್ಯ ಗಾಯಗಳಾಗಿವೆ. ಗಾಯಗೊಂಡವರಲ್ಲಿ 26 ಮಂದಿ ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರು ಅಥವಾ ಸಮೀಪದಲ್ಲಿದ್ದವರಾಗಿದ್ದರೆ, 18 ಮಂದಿ ಸ್ವತಃ ಪಟಾಕಿ ಸಿಡಿಸುತ್ತಿದ್ದವರು. ಆಸ್ಪತ್ರೆಯಲ್ಲಿ 18 ಮಕ್ಕಳು ಹಾಗೂ 26 ವಯಸ್ಕರಿಗೆ ಚಿಕಿತ್ಸೆ ನೀಡಲಾಗಿದೆ.

ರಾಜಾಜಿನಗರದ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ನವೆಂಬರ್ 7ರಿಂದ 10ರವರೆಗೆ ಪಟಾಕಿಯಿಂದ ಕಣ್ಣಿಗೆ ಗಾಯಗೊಂಡ 64 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 18 ವರ್ಷದೊಳಗಿನ 33 ಮಕ್ಕಳು ಹಾಗೂ 23 ಮಂದಿ ಪಟಾಕಿ ಸಿಡಿಸುವಾಗ ಸಮೀಪದಲ್ಲಿದ್ದವರು. ಒಟ್ಟು 61 ಮಂದಿಗೆ ಔಷಧೋಪಚಾರದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಮೂವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಕಣ್ಣಿನ ರೆಪ್ಪೆ ಸುಡುವುದು, ಗಾಯಗಳಾಗುವುದು, ಕಣ್ಣಿನ ಪಾರದರ್ಶಕ ಪಟಲಕ್ಕೆ ಸವೆತ, ಕಣ್ಣಿನ ಒಳಭಾಗದಲ್ಲಿ ರಕ್ತಸ್ರಾವ, ಪಾರದರ್ಶಕ ಪಟಲ ಹರಿಯುವುದು ಹಾಗೂ ರೆಟಿನಾಗೆ ಹಾನಿಯಾಗುವಂತಹ ಗಾಯಗಳು ಕಂಡುಬಂದಿವೆ ಎಂದು ನಾರಾಯಣ ನೇತ್ರಾಲಯದ ಕಾರ್ನಿಯಾ ವಿಭಾಗದ ಮುಖ್ಯಸ್ಥ ಹಾಗೂ ಸಲಹೆಗಾರ ಡಾ. ಯತೀಶ್ ಎಸ್. ತಿಳಿಸಿದ್ದಾರೆ.

ಇದಲ್ಲದೆ, ನವೆಂಬರ್ 10ರ ರಾತ್ರಿ 8 ಗಂಟೆಯವರೆಗೆ ನಾರಾಯಣ ನೇತ್ರಾಲಯದ ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಹಾಗೂ ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 50 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 27 ಮಕ್ಕಳು ಹಾಗೂ ಒಂಬತ್ತು ಮಂದಿ ಪಟಾಕಿ ಸಿಡಿಸುವಾಗ ಸಮೀಪದಲ್ಲಿದ್ದವರು. ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುಟ್ಟ ಗಾಯಗಳು, ಕಣ್ಣಿನ ಪಾರದರ್ಶಕ ಪಟಲ ಹರಿಯುವುದು, ಕಾರ್ನಿಯಾದಲ್ಲಿ ವಿದೇಶಿ ಕಣಗಳು ಸಿಲುಕಿಕೊಳ್ಳುವುದು ಹಾಗೂ ಕಣ್ಣಿನ ರೆಪ್ಪೆ ಊದಿಕೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ.

ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಒಟ್ಟು 33 ರೋಗಿಗಳು ದಾಖಲಾಗಿದ್ದಾರೆ. ಇವರಲ್ಲಿ ಬಹುತೇಕರು ಪಟಾಕಿಯಿಂದ ಕಣ್ಣಿಗೆ ಗಾಯಗೊಂಡವರಾಗಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದು, ಕೆಲವರಿಗೆ ಒಂದು ಕಣ್ಣಿಗೆ ಹಾಗೂ ಇನ್ನು ಕೆಲವರಿಗೆ ಎರಡೂ ಕಣ್ಣುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X