ಏಪ್ರಿಲ್ 20ರಿಂದ 'Invest Karnataka 2027': ಏರೋಸ್ಪೇಸ್-ರಕ್ಷಣಾ ವಲಯಕ್ಕೆ ಬಂಪರ್; 2026-31ರ ನೂತನ ನೀತಿ ಅನಾವರಣ..!

ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 2030ರ ವೇಳೆಗೆ ರಾಜ್ಯದಲ್ಲಿ 7.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವ ಮತ್ತು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
Chief Minister DK Shivakumar
ಇನ್ವೆಸ್ಟ್ ಕರ್ನಾಟಕ
Updated on: 

ಬೆಂಗಳೂರು: ರಾಜ್ಯದಲ್ಲಿ ಬೃಹತ್ ಕೈಗಾರಿಕಾ ಬಂಡವಾಳವನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2027ರ ಏಪ್ರಿಲ್ 20 ರಿಂದ 22 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಇನ್ವೆಸ್ಟ್ ಕರ್ನಾಟಕ 2027' (ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ) ಆಯೋಜಿಸುವುದಾಗಿ ಘೋಷಿಸಿದೆ.

ಗುರುವಾರ ಇಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮದಲ್ಲಿ ‘ಮುಂದಿನ ಭವಿಷ್ಯಕ್ಕೆ ಶಕ್ತಿ ತುಂಬುವ’ (Powering What's Next) ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಸರ್ಕಾರವು ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ (2026–31) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಡಿಜಿಟಲ್ ಕೈಗಾರಿಕಾ ಭೂ ಬ್ಯಾಂಕ್‌ಗೆ ಚಾಲನೆ ನೀಡಿತು.

ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 2030ರ ವೇಳೆಗೆ ರಾಜ್ಯದಲ್ಲಿ 7.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವ ಮತ್ತು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿದರು.

ಇದೇ ವೇಳೆ ಕರ್ನಾಟಕದ ಅಭಿವೃದ್ಧಿಯ ಪಯಣದಲ್ಲಿ ಕೈಜೋಡಿಸುವಂತೆ ದೇಶ-ವಿದೇಶಗಳ ಹೂಡಿಕೆದಾರರಿಗೆ ಆಹ್ವಾನ ನೀಡಿದ ಅವರು, ಅರೆವಾಹಕ ತಂತ್ರಜ್ಞಾನ, ಏರೋಸ್ಪೇಸ್, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಶುದ್ಧ ಇಂಧನ, ಜೀವ ವಿಜ್ಞಾನ ಮತ್ತು ವಿದ್ಯುತ್ ಚಾಲಿತ ವಾಹನ ಸೇರಿದಂತೆ ಭವಿಷ್ಯದ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಇದು ಕೇವಲ ಹೂಡಿಕೆದಾರರ ಸಮಾವೇಶವಲ್ಲ. ಕರ್ನಾಟಕದ ಭವಿಷ್ಯವನ್ನು ರೂಪಿಸುವ ಅವಕಾಶವಾಗಿದೆ. ನಿಮ್ಮ ಆಲೋಚನೆಗಳನ್ನು ತನ್ನಿ, ಹೂಡಿಕೆ ಮಾಡಿ. ನಾವೆಲ್ಲರೂ ಒಟ್ಟಾಗಿ ಭವಿಷ್ಯವನ್ನು ನಿರ್ಮಿಸೋಣ ಎಂದು ತಿಳಿಸಿದರು.

ಬಳಿಕ ವ್ಯವಹಾರವನ್ನು ಸುಲಭಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಹೂಡಿಕೆದಾರರಿಗೆ ಅನುಮತಿ ಮತ್ತು ಅಗತ್ಯ ಮಂಜೂರಾತಿ ಪಡೆಯಲು ನೋಡಲ್ ಅಧಿಕಾರಿಗಳು ಮಾರ್ಗದರ್ಶನ ನೀಡಲಿದ್ದಾರೆ. ವಿಳಂಬವನ್ನು ಕಡಿಮೆ ಮಾಡಿ ತ್ವರಿತ ನಿರ್ಧಾರ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.

Chief Minister DK Shivakumar
'ಹೂಡಿಕೆ ತರಲು ಹೋಗಿದ್ದಾರೋ? Race ನೋಡಲು ಹೋಗಿದ್ದಾರೋ?..': ವಿಜಯ್‌ಗೆ DMK ಪ್ರಶ್ನೆ; 'ತಪ್ಪೇನು?'- TVK ತಿರುಗೇಟು

ಹೂಡಿಕೆದಾರರು ಕಡತಗಳ ಹಿಂದೆ ಅಲೆಯುವ ಬದಲು ಕಾರ್ಖಾನೆಗಳನ್ನು ನಿರ್ಮಿಸುವಂತಾಗಬೇಕು. ಕೇವಲ ಒಂದು ಇಲಾಖೆಯಲ್ಲ, ಇಡೀ ಸರ್ಕಾರವೇ ಹೂಡಿಕೆದಾರರ ಬೆಂಬಲಕ್ಕೆ ನಿಲ್ಲಬೇಕು ಎಂದು ತಿಳಿಸಿದರು.

2025–30ರ ಕೈಗಾರಿಕಾ ನೀತಿಯಡಿ 2030ರ ವೇಳೆಗೆ 7.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವುದರ ಜತೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

ಇದರೊಂದಿಗೆ ವಿವಿಧ ವಲಯಗಳಿಗೆ ಪ್ರತ್ಯೇಕ ಹೂಡಿಕೆ ಗುರಿಗಳನ್ನೂ ಘೋಷಿಸಲಾಗಿದೆ. 2026–31ರ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಡಿ 60 ಸಾವಿರ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿ 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದೇ ಅವಧಿಯ ಜವಳಿ ಮತ್ತು ಉಡುಪು ನೀತಿಯಡಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಹಾಗೂ ಐದು ಲಕ್ಷ ಉದ್ಯೋಗಗಳ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ.

ಪ್ರಾದೇಶಿಕ ಸಮತೋಲಿತ ಅಭಿವೃದ್ಧಿಗೆ ಒತ್ತು ನೀಡಿದ ಶಿವಕುಮಾರ್, ಕರ್ನಾಟಕದ ಆರ್ಥಿಕ ಬೆಳವಣಿಗೆಯ ಮುಂದಿನ ಹಂತ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ತುಮಕೂರು ಮತ್ತು ಕಲಬುರಗಿಯಂತಹ ನಗರಗಳಿಗೂ ವಿಸ್ತರಿಸಲಿದೆ ಎಂದರು.

ಬೆಂಗಳೂರಿನ ಹೊರಭಾಗದಲ್ಲಿ ಕನಿಷ್ಠ ಐದು ಕೈಗಾರಿಕಾ ಮತ್ತು ನಾವೀನ್ಯತಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಕೈಗಾರಿಕಾ ಪಾರ್ಕ್‌ಗಳು, ರಸ್ತೆಗಳು, ಸರಕು ಸಾಗಣೆ ವ್ಯವಸ್ಥೆ ಹಾಗೂ ಪ್ರಾದೇಶಿಕ ಸಂಪರ್ಕ ಜಾಲವನ್ನು ಬಲಪಡಿಸಲಾಗುತ್ತಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಎರಡನೇ ಹಾಗೂ ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X