

ಚೆನ್ನೈ: ಲಂಡನ್‌ನಲ್ಲಿ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ತಮ್ಮ ಸ್ನೇಹಿತ ಹಾಗೂ ನಟ-ರೇಸರ್ ಅಜಿತ್ ಕುಮಾರ್ ಅವರ ಕಾರ್ ರೇಸ್‌ಗೆ ಹಾಜರಾಗಿರುವುದನ್ನು ಡಿಎಂಕೆ ಟೀಕಿಸಿದೆ.
ಇದಕ್ಕೆ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಿರುಗೇಟು ನೀಡಿದ್ದು, ಪ್ರವಾಸದ ವೇಳೆ ಸ್ನೇಹಿತನನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಯುನೈಟೆಡ್ ಕಿಂಗ್‌ಡಮ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ 2026ರ Michelin Le Mans Cup ರೇಸ್‌ಗೆ ವಿಜಯ್ ಸಾಂಕೇತಿಕವಾಗಿ ಹಸಿರು ನಿಶಾನೆ ತೋರಿದರು.
ಇದೇ ವೇಳೆ, 2026ರ ಚಾಂಪಿಯನ್‌ಶಿಪ್‌ನ ಐದನೇ ಸುತ್ತಿನ ಸ್ಪರ್ಧೆಯಲ್ಲಿ ನಟ ಹಾಗೂ ಮೋಟಾರ್ ಸ್ಪೋರ್ಟ್ಸ್ ಸ್ಪರ್ಧಿ ಅಜಿತ್ ಕುಮಾರ್ ಟ್ರ್ಯಾಕ್‌ಗೆ ಇಳಿದರು.
ಅಜಿತ್‌ರನ್ನು ಅಪ್ಪಿಕೊಂಡ ವಿಜಯ್
ಇನ್ನು ರೇಸ್ ಗೂ ಮೊದಲು ನಾರ್ಥಾಂಪ್ಟನ್‌ಶೈರ್‌ನ ಟ್ರ್ಯಾಕ್ ಮೇಲೆ ಸಿಎಂ ವಿಜಯ್ ಓಡಿ ಬಂದು, ಕೈಗಳನ್ನು ಚಾಚಿ ಅಜಿತ್ ಕುಮಾರ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡರು. ಈ ಆತ್ಮೀಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಆಗಾಗ್ಗೆ ಪರಸ್ಪರ ವಾಗ್ವಾದ ನಡೆಸುವ ಇಬ್ಬರು ನಟರ ಅಭಿಮಾನಿಗಳಲ್ಲಿ ಇದು ಸಂತಸ ಮೂಡಿಸಿದೆ.
ಡಿಎಂಕೆ ಕಿಡಿ
ವಿಜಯ್ ಅವರ ಈ ಭೇಟಿಯು ಪ್ರತಿಪಕ್ಷ ಡಿಎಂಕೆಯ ಅಸಮಾಧಾನಕ್ಕೆ ಕಾರಣವಾಗಿದೆ. ‘ಲಂಡನ್‌ನಿಂದ ಹೂಡಿಕೆಗಳನ್ನು ತರಲು ಹೋಗುತ್ತಿದ್ದೇನೆ' ಎಂದು ಅವರು ಹೇಳಿದ್ದರು. ಆದರೆ, ಸ್ನೇಹಿತ ಅಜಿತ್ ಅವರ ಕಾರ್ ರೇಸ್ ನೋಡಲು ಹೋಗಿರುವುದನ್ನು ಎಲ್ಲರೂ ನೋಡಿದ್ದಾರೆ’ ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಟೀಕಿಸಿದ್ದಾರೆ.
ಡಿಎಂಕೆ ಶಾಸಕ ಮಾರ್ಕಂಡೇಯನ್ ಕೂಡ ವಿಜಯ್ ಅವರ ಲಂಡನ್ ಪ್ರವಾಸವನ್ನು ಪ್ರಶ್ನಿಸಿದ್ದಾರೆ. ‘ತಮಿಳುನಾಡಿನಲ್ಲಿ ರೈತರ ಸಮಸ್ಯೆ, ಮೀನುಗಾರರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳಿವೆ. ಈಗ ಹೂಡಿಕೆ ಆಕರ್ಷಿಸುವ ತುರ್ತು ಏನಿದೆ?’ ಎಂದು ಅವರು ಟೀಕಿಸಿದ್ದಾರೆ.
'ತಪ್ಪೇನಿದೆ'; ತಿರುಗೇಟು ಕೊಟ್ಟ ಟಿವಿಕೆ
ಡಿಎಂಕೆ ಟೀಕೆಗೆ ಪ್ರತಿಕ್ರಿಯಿಸಿರುವ ಟಿವಿಕೆ ವಕ್ತಾರ ಅಮೆರಿಕೈ ವಿ. ನಾರಾಯಣನ್, ಮುಖ್ಯಮಂತ್ರಿ ವಿಜಯ್ ಅವರ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ಜನರು ಪ್ರಚಾರ ಮತ್ತು ಪ್ರದರ್ಶನದ ಬಗ್ಗೆಯೇ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದರೆ, ನಮ್ಮ ಮುಖ್ಯಮಂತ್ರಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಪ್ರವಾಸದಲ್ಲಿರುವಾಗ ಸ್ನೇಹಿತನನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಅಜಿತ್ ತಮಿಳುನಾಡಿನಲ್ಲಿ ಮಾತ್ರವಲ್ಲ, ರೇಸಿಂಗ್ ಕ್ಷೇತ್ರದಲ್ಲೂ ಖ್ಯಾತರಾಗಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಅವರಂತಹ ವ್ಯಕ್ತಿಯನ್ನು ಭೇಟಿಯಾಗುವುದರಿಂದ ರಾಜ್ಯದ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತದೆ. ನಮ್ಮ ಬಗ್ಗೆ ಅಸೂಯೆ ಹೊಂದಿರುವುದರಿಂದಲೇ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಇಂತಹ ಸಣ್ಣಪುಟ್ಟ ಮಾತುಗಳಿಂದ ನಾವು ವಿಚಲಿತರಾಗಬೇಕಿಲ್ಲ’ ಎಂದು ನಾರಾಯಣನ್ ಹೇಳಿದ್ದಾರೆ.
ಮುಂದುವರಿದು, ‘ಮುಖ್ಯಮಂತ್ರಿ ನೀತಿ ನಿರ್ದೇಶನ ನೀಡಿದ್ದಾರೆ. ಸಚಿವರು ಮತ್ತು ಆಡಳಿತ ವ್ಯವಸ್ಥೆ ತಮ್ಮ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಯವರು ಪ್ರತಿಯೊಂದು ವಿಚಾರದಲ್ಲೂ ನೇರವಾಗಿ ತೊಡಗಿಸಿಕೊಳ್ಳಬೇಕಿಲ್ಲ. ರಾಜ್ಯದ ಸಿಇಒ ಆಗಿ ಅವರು ಹೂಡಿಕೆಗಳನ್ನು ಆಕರ್ಷಿಸಲು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
ಮೋಟಾರ್ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಯೋಜನೆ
ಈ ನಡುವೆ ತಮಿಳುನಾಡಿನಲ್ಲಿ ವಿಶ್ವದರ್ಜೆಯ ಮೋಟಾರ್‌ಸ್ಪೋರ್ಟ್ಸ್ ಸಿಟಿ ನಿರ್ಮಿಸುವ ಯೋಜನೆಯ ಭಾಗವಾಗಿ ವಿಜಯ್ ಅವರು ಬ್ರಿಟನ್‌ಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಚೆನ್ನೈ ಸಮೀಪ ಪ್ರಸ್ತಾವಿತವಾಗಿರುವ ಈ ಯೋಜನೆಯಡಿ, ರಾಜ್ಯದಲ್ಲಿರುವ ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಮೋಟಾರ್ ಸ್ಪೋರ್ಟ್ಸ್ ಮೂಲಸೌಕರ್ಯ, ಕ್ರೀಡಾ ಪ್ರವಾಸೋದ್ಯಮ ಹಾಗೂ ವಾಹನ ಉದ್ಯಮಕ್ಕೆ ಸಂಬಂಧಿಸಿದ ವಿಶೇಷ ಕೈಗಾರಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸಲು ಈ ಪ್ರವಾಸ ನೆರವಾಗಲಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಕೇವಲ ರೇಸಿಂಗ್ ಟ್ರ್ಯಾಕ್ ನಿರ್ಮಿಸುವುದಕ್ಕೆ ಸೀಮಿತವಾಗದೆ, ಆಟೋಮೊಬೈಲ್ ಉತ್ಪಾದನೆ, ತಂತ್ರಜ್ಞಾನ, ಮನರಂಜನೆ ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕ ಹೊಂದಿರುವ ವಾಣಿಜ್ಯಿಕವಾಗಿ ಯಶಸ್ವಿಯಾಗಬಲ್ಲ ಸಮಗ್ರ ಮೋಟಾರ್ ಸ್ಪೋರ್ಟ್ಸ್ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಟಿವಿಕೆ ಮೂಲಗಳು ತಿಳಿಸಿವೆ.
ಅಜಿತ್ ಧನ್ಯವಾದ
ಸಿಲ್ವರ್‌ಸ್ಟೋನ್‌ನಲ್ಲಿ ತಮ್ಮನ್ನು ಭೇಟಿಯಾದ ಮುಖ್ಯಮಂತ್ರಿ ವಿಜಯ್ ಅವರಿಗೆ ಅಜಿತ್ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ‘ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸಿಲ್ವರ್‌ಸ್ಟೋನ್‌ಗೆ ಬಂದು ನಮ್ಮನ್ನು ಭೇಟಿಯಾದ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ’ ಎಂದು ಅಜಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನಾವು ಚಿತ್ರರಂಗದಲ್ಲಿ 34 ವರ್ಷಗಳಿಂದ ಸಹೋದ್ಯೋಗಿಗಳಾಗಿದ್ದೇವೆ. ಅವರ ಹೊಸ ಪ್ರಯಾಣದ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಚೆನ್ನೈನಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲು ಅಗತ್ಯವಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಅವರು ನೇರವಾಗಿ ನೋಡಲೆಂದು ನಾವು ಆಹ್ವಾನಿಸಿದ್ದೆವು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಭಾರತದಲ್ಲೇ ರೇಸ್‌ಗಳಲ್ಲಿ ಭಾಗವಹಿಸುವಂತಾಗಬೇಕು ಎಂಬುದು ನನ್ನ ಆಶಯ’ ಎಂದು ಅಜಿತ್ ಹೇಳಿದ್ದಾರೆ.