ಬಳ್ಳಾರಿ: ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಸಾಮಾನ್ಯ ಯುವಕನ ಹೆಸರಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿಗೂ ಅಧಿಕ ಹಣದ ಜಿಎಸ್‌ಟಿ ವಂಚನೆ ನಡೆದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ವಂಚಕರ ಕೈಚಳಕಕ್ಕೆ ಖಾಸಗಿ ಕಂಪನಿಯೊಂದರಲ್ಲಿ (ಟೊಯೋಟಾ ಶೋರೂಮ್) ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುವ ಯುವಕನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಶಾಕಿಂಗ್ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ:
ಏನಿದು ಪ್ರಕರಣ?
ಬಳ್ಳಾರಿ ನಗರದ ನಿವಾಸಿ ರೋಷನ್ ಎಂಬುವವರು ಟೊಯೋಟಾ ಶೋರೂಮ್‌ನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ತಿಂಗಳಿಗೆ ₹15,000 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಪಕೃದ್ದೀನ್ ಎಸಿ ಗೋಡೌನ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದು, ಕುಟುಂಬವು ಸಾಮಾನ್ಯ ಆರ್ಥಿಕ ಸ್ಥಿತಿಯಲ್ಲಿದೆ. ಆದರೆ, ವಂಚಕರು ರೋಷನ್ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ ದಾಖಲೆಗಳನ್ನು ಬಳಸಿಕೊಂಡು 'ರೋಷನ್ ಎಂಟರ್‌ಪ್ರೈಸಸ್' ಎಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಿದ್ದಾರೆ. ಜೊತೆಗೆ, ನೋಂದಣಿ ವೇಳೆ ಬೇರೆಯವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನೀಡಿದ್ದರಿಂದ, ಒಟಿಪಿ ಅಥವಾ ಯಾವುದೇ ವಹಿವಾಟಿನ ಸಂದೇಶಗಳು ರೋಷನ್ ಅವರಿಗೆ ಬಂದಿರಲಿಲ್ಲ.
ಐದೇ ತಿಂಗಳಲ್ಲಿ ₹350 ಕೋಟಿ ವಹಿವಾಟು
ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ ₹350 ಕೋಟಿ ರೂಪಾಯಿಗಳಷ್ಟು ಬೃಹತ್ ಜಿಎಸ್‌ಟಿ ವಹಿವಾಟು ನಡೆಸಿರುವ ಖದೀಮರು, ನಂತರ ಆ ಖಾತೆಯನ್ನು ಮುಚ್ಚಿದ್ದಾರೆ. ಆದರೆ, ನವೆಂಬರ್ 12ರಂದು ಜಿಎಸ್‌ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ, "ಇಷ್ಟೊಂದು ದೊಡ್ಡ ವಹಿವಾಟು ನಡೆಸಿ ಏಕಾಏಕಿ ಜಿಎಸ್‌ಟಿ ಖಾತೆಯನ್ನು ಏಕೆ ಮುಚ್ಚಿದ್ದೀರಿ?" ಎಂದು ವಿಚಾರಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಆಘಾತಕ್ಕೊಳಗಾದ ರೋಷನ್ ಮತ್ತು ಅವರ ಕುಟುಂಬಸ್ಥರು ತಕ್ಷಣವೇ ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.