ಮಂಗಳೂರಿನಲ್ಲಿ ಒಂದೇ ದಿನದ ಸಚಿವ ಸಂಪುಟ ಸಭೆಗೆ 3.83 ಕೋಟಿ ಖರ್ಚು: ತೀವ್ರ ಚರ್ಚೆಗೆ ಗ್ರಾಸವಾದ ಸರ್ಕಾರ ನಡೆ

ಸೆಪ್ಟೆಂಬರ್ 17ರಂದು ಹೊರಡಿಸಲಾದ ಹಣಕಾಸು ಇಲಾಖೆಯ ಆದೇಶದ ಪ್ರಕಾರ, ಸಚಿವ ಸಂಪುಟ ಸಭೆಯ ಪೂರ್ವಸಿದ್ಧತೆ ಮತ್ತು ವಿವಿಧ ವ್ಯವಸ್ಥೆಗಳಿಗಾಗಿ 3,83,26,700 ರೂ. ಮಂಜೂರು ಮಾಡಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ವ್ಯವಸ್ಥೆಗಳಿಗಾಗಿ ಕರ್ನಾಟಕ ಸರ್ಕಾರವು ಜಿಎಸ್‌ಟಿ ಹೊರತುಪಡಿಸಿ 3.83 ಕೋಟಿ ರೂ. ಮಂಜೂರು ಮಾಡಿದೆ. ಒಂದೇ ದಿನದ ಸರ್ಕಾರಿ ಸಭೆಗಾಗಿ ಇಷ್ಟೊಂದು ದೊಡ್ಡ ಮೊತ್ತದ ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೆಪ್ಟೆಂಬರ್ 17ರಂದು ಹೊರಡಿಸಲಾದ ಹಣಕಾಸು ಇಲಾಖೆಯ ಆದೇಶದ ಪ್ರಕಾರ, ಸಚಿವ ಸಂಪುಟ ಸಭೆಯ ಪೂರ್ವಸಿದ್ಧತೆ ಮತ್ತು ವಿವಿಧ ವ್ಯವಸ್ಥೆಗಳಿಗಾಗಿ 3,83,26,700 ರೂ. ಮಂಜೂರು ಮಾಡಲಾಗಿದೆ.

ಈ ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ ಆತಿಥ್ಯ, ಇಂಧನ, ಹೆಚ್ಚುವರಿ ವಾಹನಗಳ ಬಾಡಿಗೆ, ಸಾರಿಗೆ ವ್ಯವಸ್ಥೆ, ವೇದಿಕೆ ನಿರ್ವಹಣೆ ಸೇರಿದಂತೆ ಇತರ ಸಂಬಂಧಿತ ವ್ಯವಸ್ಥೆಗಳು ಸೇರಿವೆ.

ಈ ಎಲ್ಲ ಕಾಮಗಾರಿಗಳನ್ನು ನಿರ್ವಹಿಸುವುದು ಮತ್ತು ವ್ಯವಸ್ಥೆಗಳ ಸಮನ್ವಯದ ಜವಾಬ್ದಾರಿಯನ್ನು ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.

ಗಮನಾರ್ಹ ಸಂಗತಿಯೆಂದರೆ, ಖರೀದಿ ಪ್ರಕ್ರಿಯೆಗೆ ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆಗಳ ಕಾಯ್ದೆ-1999ರ ನಿಯಮಗಳಿಂದ ವಿನಾಯಿತಿ ನೀಡಲು ಸರ್ಕಾರವು ಕಾಯ್ದೆಯ ಸೆಕ್ಷನ್ 4(ಜಿ) ನ್ನು ಅನ್ವಯಿಸಿದೆ.

ಹಣಕಾಸು ಇಲಾಖೆಯ ವೆಚ್ಚ ಕೋಶ ಹೊರಡಿಸಿರುವ ಆದೇಶದಲ್ಲಿ, ಸಮಂಜಸ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ.

ಸಭೆಯ ಆಯೋಜನೆಗಾಗಿ ಇತರ ವಿವಿಧ ಇಲಾಖೆಗಳ ಮೂಲಕವೂ ವೆಚ್ಚ ಮಾಡಿರುವ ಸಾಧ್ಯತೆಯಿದ್ದು, ಈ ಕುರಿತ ವಿವರಗಳು ಆದೇಶದಲ್ಲಿ ಉಲ್ಲೇಖವಾಗಿಲ್ಲ. ವಿವಿಧ ಇಲಾಖೆಗಳು ಹೆಚ್ಚುವರಿಯಾಗಿ ಮಾಡಿರಬಹುದಾದ ವೆಚ್ಚವನ್ನೂ ಪರಿಗಣಿಸಿದರೆ, ಒಂದೇ ಒಂದು ಸಚಿವ ಸಂಪುಟ ಸಭೆ ನಡೆಸಲು ತಗುಲಿರುವ ಒಟ್ಟು ವೆಚ್ಚದ ಬಗ್ಗೆ ಈ ಅನುದಾನ ಮಂಜೂರಾತಿ ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X