ರೇಸ್ ಕೋರ್ಸ್ ಭೂಮಿ ಮರಳಿ ಪಡೆದ ರಾಜ್ಯ ಸರ್ಕಾರ: 79 ಎಕರೆ ಜಾಗದಲ್ಲಿ ತಲೆಎತ್ತಲಿದೆ ಬಹುಮಹಡಿ ಆಡಳಿತ ಸೌಧ..!

ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣ ವೆಚ್ಚ ಇನ್ನೂ ಅಂತಿಮವಾಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳ ನಡುವೆ ಮಾಹಿತಿ ವಿನಿಮಯ ವೇಗಗೊಳಿಸುವುದು ಹಾಗೂ ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ (BTC) ಜಾಗದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಒಳಗೊಂಡ ಬೃಹತ್ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.

ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸುವ ಮತ್ತು ಆಡಳಿತ ಯಂತ್ರಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯ ನಿರ್ಧಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಗಳ ಬಳಿಕ, ರೇಸ್ ಕೋರ್ಸ್ ಆಸ್ತಿಯ ಒಟ್ಟು 79.14 ಎಕರೆ ಭೂಮಿಯನ್ನು ಸರ್ಕಾರ ಮರಳಿ ಪಡೆಯುತ್ತಿದೆ.

ಇದರಂತೆ ನಗರದ ಪ್ರಮುಖ ಸರ್ಕಾರಿ ಕಚೇರಿಗಳನ್ನೆಲ್ಲ ಒಂದೇ ಸ್ಥಳದಲ್ಲಿ ಹೊಂದಿರುವ ಬಹುಮಹಡಿ ಕಟ್ಟಡ ನಿರ್ಮಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣ ವೆಚ್ಚ ಇನ್ನೂ ಅಂತಿಮವಾಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳ ನಡುವೆ ಮಾಹಿತಿ ವಿನಿಮಯ ವೇಗಗೊಳಿಸುವುದು ಹಾಗೂ ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ,

ನವದೆಹಲಿಯಲ್ಲಿಯೂ ಹಲವು ಸರ್ಕಾರಿ ಕಚೇರಿಗಳು ಒಂದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿಯೂ ಇದೇ ಮಾದರಿಯನ್ನು ಅನುಸರಿಸುವ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಕಚೇರಿಗಳು ಮೆಟ್ರೊ ನಿಲ್ದಾಣಗಳ ಸಮೀಪದಲ್ಲಿದ್ದರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಸುಲಭವಾಗಿ ತಲುಪಬಹುದು. ಹೊಸ ಕಚೇರಿ ಸಂಕೀರ್ಣಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ವಿಧಾನಸೌಧ ಅಥವಾ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳಿಂದ ವಿಶೇಷ ಸಂಪರ್ಕ ಬಸ್ ಸೇವೆಗಳನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ನ್ಯಾಯಾಂಗ ಇಲಾಖೆಗೆ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು 7ರಿಂದ 8 ಎಕರೆ ಜಮೀನು ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಇದು ಈಗಿರುವ ಕರ್ನಾಟಕ ಹೈಕೋರ್ಟ್ ಕಟ್ಟಡದ ವಿಸ್ತರಣೆಯಂತಿರಲಿದೆ ಎಂದು ಮೂಲಗಳು ತಿಳಿಸಿವೆ.

File photo
ನೂತನ ಹೈಕೋರ್ಟ್ ನಿರ್ಮಾಣಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಜಮೀನು ಶೀಘ್ರವೇ ಹಂಚಿಕೆ: ರಾಜ್ಯ ಸರ್ಕಾರ

ಹೊಸ ಸಂಕೀರ್ಣದಲ್ಲಿ ಸಾರಿಗೆ, ಆರೋಗ್ಯ, ಇಂಧನ ಮತ್ತು ಮಹಾನಗರ ಪಾಲಿಕೆ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ಪ್ರಸ್ತುತ ಈ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ಅಥವಾ ಬಾಡಿಗೆಗೆ ನೀಡುವ ಉದ್ದೇಶವಿದೆ. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಂಡಳಿ ಮತ್ತು ನಿಗಮಗಳ ಕಚೇರಿಗಳಿಗಾಗಿ ಕೆಲವು ಕಟ್ಟಡಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಲಾಗಿರುವ ನಾಲ್ಕು ಎಕರೆ ಜಮೀನಿನ 30 ವರ್ಷಗಳ ಗುತ್ತಿಗೆಯನ್ನು ವಿಸ್ತರಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಉಳಿದ 79.14 ಎಕರೆ ಜಮೀನನ್ನು ವಾಪಸ್ ಪಡೆಯಲು ನಿರ್ಧರಿಸಿತ್ತು. ಈ ಜಾಗದಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿರುವ ಪಾರಂಪರಿಕ ಕಟ್ಟಡವನ್ನು ಯಾವುದೇ ರೀತಿಯಲ್ಲಿ ಬದಲಾಯಿಸದಿರಲು ಸರ್ಕಾರ ಒಪ್ಪಿಕೊಂಡಿದೆ. ಈ ಹಿಂದೆ ಕುದುರೆ ಓಟದ ಚಟುವಟಿಕೆಗಳನ್ನು 110 ಎಕರೆ ವಿಸ್ತೀರ್ಣದ ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸುವುದಾಗಿ ಸರ್ಕಾರ ಘೋಷಿಸಿತ್ತು.

ಮೂರು ವರ್ಷಗಳ ಹಿಂದೆ ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಎಲ್ಲ ಸರ್ಕಾರಿ ಕಚೇರಿಗಳಿಗಾಗಿ ಬಹುಮಹಡಿ ಕಟ್ಟಡ ನಿರ್ಮಿಸಲು ಸರ್ಕಾರ ಬಯಸಿತ್ತು. ಆದರೆ ಸೂಕ್ತ ಜಮೀನು ಗುರುತಿಸುವುದು ಸವಾಲಾಗಿತ್ತು ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಸರ್ಕಾರ 79 ಎಕರೆ ಜಮೀನನ್ನು ವಶಕ್ಕೆ ಪಡೆಯುತ್ತಿರುವುದರಿಂದ ಬೇರೆ ಜಾಗ ಹುಡುಕುವ ಅಗತ್ಯವಿಲ್ಲ. ಬಹುಮಹಡಿ ಕಟ್ಟಡಗಳ ಜೊತೆಗೆ ಜನರು ನಡೆದಾಡಲು ಅನುಕೂಲವಾಗುವಂತೆ ವಿಶಾಲವಾದ ತೆರೆದ ಸ್ಥಳಗಳನ್ನು ನಿರ್ಮಿಸುವುದು ಸೂಕ್ತ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಜಾಗದಲ್ಲಿ ಮತ್ತೊಂದು ಬೃಹತ್ ಹಸಿರು ಪ್ರದೇಶ ನಿರ್ಮಿಸುವುದು, ವಾಣಿಜ್ಯ ಉದ್ದೇಶಕ್ಕಾಗಿ ಸಣ್ಣ ಸಣ್ಣ ನಿವೇಶನಗಳಾಗಿ ವಿಂಗಡಿಸುವುದು ಅಥವಾ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಿಸುವುದು ಸೇರಿದಂತೆ ಹಲವು ಆಯ್ಕೆಗಳು ಸರ್ಕಾರದ ಮುಂದಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X