

ಬೆಂಗಳೂರು: ಅಕ್ರಮ ಬಾಂಗ್ಲಾದೇಶಿ ವಲಸಿಗ ಎಂದು ಶಂಕಿಸಲಾಗಿರುವ ಬೆಂಗಳೂರಿನ ಗುಜರಿ ವ್ಯಾಪಾರಿ ಅಬ್ದುಲ್ ರಹೀಮ್ ಅವರ ರಾಷ್ಟ್ರೀಯತೆಯನ್ನು ಕಾನೂನುಬದ್ಧವಾಗಿ ನಿರ್ಧರಿಸುವವರೆಗೆ ಅವರನ್ನು ಗಡೀಪಾರು ಮಾಡದಂತೆ ಕರ್ನಾಟಕ ಹೈಕೋರ್ಟ್ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ (FRRO) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ಮಾರ್ಚ್ 2026ರಲ್ಲಿ ಹೊರಡಿಸಲಾಗಿದ್ದ ನಿರ್ಬಂಧದ ಆದೇಶವನ್ನು ಪ್ರಶ್ನಿಸಿ ಅಬ್ದುಲ್ ರಹೀಮ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರ ಅಬ್ದುಲ್ ರಹೀಂ ಅವರ ರಾಷ್ಟ್ರೀಯತೆ ಭಾರತೀಯರದ್ದೇ ಅಥವಾ ಬಾಂಗ್ಲಾದೇಶದ್ದೇ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಗಡಿಪಾರು ಮಾಡುವ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಎಫ್‌ಆರ್‌ಆರ್‌ಒಗೆ ಸೂಚಿಸಿದೆ.
ಅಧಿಕಾರಿಗಳು ಅರ್ಜಿದಾರರ ರಾಷ್ಟ್ರೀಯತೆಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನೇ ಆರಂಭಿಸದಿರುವಾಗ, ಪ್ರಸ್ತುತ ರಿಟ್ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯವೇ ಅವರ ರಾಷ್ಟ್ರೀಯತೆಯನ್ನು ನಿರ್ಧರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಆದರೆ, ಪುನರ್ವಸತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರು ಉಟೈಲ್ ಫೌಂಡೇಶನ್‌ನಿಂದ ಹೊರಗೆ ತೆರಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇದೇ ವೇಳೆ ಅಬ್ದುಲ್ ರಹೀಂ ಅವರ ಸೋದರಳಿಯ ಜಾಹಿದ್ ಇಸ್ಲಾಂ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ.
2026ರ ಜುಲೈ 6ರಂದು ಹೊರಡಿಸಿದ್ದ ಮಧ್ಯಂತರ ಆದೇಶದಲ್ಲಿ ಅರ್ಜಿದಾರರನ್ನು ಗಡಿಪಾರು ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.
ತಾವು ಭಾರತೀಯ ಪ್ರಜೆಗಳು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಬ್ದುಲ್ ರಹೀಂ ಅವರು 1979ರಲ್ಲಿ ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಜನಿಸಿದ್ದು, 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಕುಡ್ಲು ಪ್ರದೇಶದಲ್ಲಿ ನೋಂದಾಯಿತ ಸಂಸ್ಥೆಯೊಂದರ ಮೂಲಕ ತ್ಯಾಜ್ಯ ನಿರ್ವಹಣೆ ಮತ್ತು ಗುಜರಿ ವ್ಯಾಪಾರ ನಡೆಸುತ್ತಿದ್ದಾರೆ. ಅವರಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಆರು ತಿಂಗಳ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ಆಧಾರ್ ಕಾರ್ಡ್ ಸೇರಿದಂತೆ ಅಗತ್ಯವಿರುವ ಎಲ್ಲ ಗುರುತಿನ ದಾಖಲೆಗಳೂ ತಮ್ಮ ಬಳಿ ಇವೆ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ನಡುವೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶೀಯರನ್ನು ಪತ್ತೆಹಚ್ಚುವ ಕಾರ್ಯಾಚರಣೆಯ ಭಾಗವಾಗಿ 2026ರ ಮಾರ್ಚ್ 5ರಂದು ಪರಪ್ಪನ ಅಗ್ರಹಾರ ಪೊಲೀಸರು ರಹೀಂ ಅವರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ ಒಪ್ಪಿಸಿದ್ದರು. ಆದರೆ, ರಹೀಂ ಸಲ್ಲಿಸಿರುವ ಜನನ ಪ್ರಮಾಣಪತ್ರ ನೈಜವಾದುದಲ್ಲ ಎಂದು ವಲಸೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಸೆಷನ್ಸ್ ನ್ಯಾಯಾಲಯವು ರಹೀಂ ಅವರು ಬಾಂಗ್ಲಾದೇಶದ ಪ್ರಜೆ ಎಂಬ ಆರೋಪದ ಆಧಾರದ ಮೇಲೆ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ತೀರ್ಪಿನ ವಿರುದ್ಧ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದೆ. ಈ ನಡುವೆ ಅವರಿಗೆ ಜಾಮೀನು ದೊರೆತಿದೆ.