

ಉಡುಪಿ: ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳಂತೆ ವರ್ತಿಸಿದ ವಂಚಕರು, ಅಕ್ರಮ ಹಣ ವರ್ಗಾವಣೆ ಹಾಗೂ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರನ್ನು 'ಡಿಜಿಟಲ್ ಅರೆಸ್ಟ್' ಮಾಡಿ ಅವರಿಂದ 15.98 ಲಕ್ಷ ರೂಪಾಯಿಗಳನ್ನು ದೋಚಿರುವ ಘಟನೆ ನಡೆದಿದೆ.
ದೂರುದಾರರಿಗೆ ಅಕ್ಟೋಬರ್ 18 ರಂದು ವಂಚಕರಿಂದ ಕರೆ ಬಂದಿದೆ. ದೆಹಲಿಯಲ್ಲಿ ದೂರುದಾರರ ಹೆಸರಿನಲ್ಲಿರುವ ಐಸಿಐಸಿಐ ಬ್ಯಾಂಕ್ ಪಾಸ್‌ಬುಕ್ ವಶಪಡಿಸಿಕೊಳ್ಳಲಾಗಿದ್ದು, ಪಂಕಜ್ ಶರ್ಮಾ ಎಂಬ ವ್ಯಕ್ತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣ ಪ್ರಕರಣಕ್ಕೆ ಲಿಂಕ್ ಆಗಿದೆ ಎಂದು ವಂಚಕರು ನಂಬಿಸಿದ್ದಾರೆ.
ತಾನು ದೆಹಲಿಯ ಸಿಬಿಐ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಕರೆ ಮಾಡಿದ ವ್ಯಕ್ತಿಯು, ದೂರುದಾರರನ್ನು ತಕ್ಷಣವೇ ಬಂಧಿಸಲು ನ್ಯಾಯಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾನೆ. ದೂರುದಾರರು ತಕ್ಷಣವೇ ದೆಹಲಿಗೆ ಬರಬೇಕು ಅಥವಾ ವಿಡಿಯೋ ಕರೆ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ್ದಾನೆ.
ನಂತರ, ವಂಚಕ ದೂರುದಾರರ ಬಳಿಯಿರುವ ನಗದು, ಚಿನ್ನ ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡಿದ್ದಾನೆ. ಅಲ್ಲದೆ, ತಮ್ಮ ಬಳಿಯಿರುವ ಎಲ್ಲ ಹಣವನ್ನು ತಾವು ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾನೆ.