

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸುಮಾರು ₹45 ಕೋಟಿ ಮೌಲ್ಯದ 15 ಎಕರೆ ರೈತರ ಜಮೀನನ್ನು ನಕಲಿ ದಾಖಲೆಗಳ ಮೂಲಕ ಗ್ರಾಮ ಸಹಾಯಕಿ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಬೃಹತ್ ಭೂ ಹಗರಣ ಬೆಳಕಿಗೆ ಬಂದಿದೆ. ಈ ಸಂಬಂಧ ತಹಶೀಲ್ದಾರ್ ಮನೀಷಾ ಎನ್. ಪತ್ರಿ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದ್ದು, ನಾಲ್ವರು ಕಂದಾಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಭೂ ಹಗರಣ?
ಬಾಗೇಪಲ್ಲಿಯ ಪುಲವಾರಪಲ್ಲಿ ಗ್ರಾಮದ ರೈತರಾದ ಕೆ.ವಿ. ಲಕ್ಷ್ಮಯ್ಯ, ಅಂಜನಪ್ಪ, ಅಕ್ಕಾಯಮ್ಮ ಸೇರಿದಂತೆ ನಾಲ್ವರು ರೈತರಿಗೆ ಸೇರಿದ 15 ಎಕರೆ ಪಿತ್ರಾರ್ಜಿತ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ, ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಳ್ಳಲಾಗಿತ್ತು. ಅದರಲ್ಲೂ, ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಮತ್ತು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಭೂಮಿಗೆ ಭಾರಿ ಬೇಡಿಕೆ ಬಂದಿದೆ. ಸುಮಾರು ₹45 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಈ ಜಮೀನನ್ನು KIADBಗೆ ಸ್ವಾಧೀನಪಡಿಸಿ, ಸರ್ಕಾರದಿಂದ ಬರುವ ಕೋಟ್ಯಂತರ ರೂಪಾಯಿ ಪರಿಹಾರದ ಹಣವನ್ನು ಲಪಟಾಯಿಸಲು ಈ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಹಾಗಾದ್ರೆ, ನಕಲಿ ಪೌತಿ ಖಾತೆ ನಡೆದಿದ್ದು ಹೇಗೆ?
ಮೂಲ ರೈತರ ಕುಟುಂಬಕ್ಕೂ ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಅವರಿಗೂ ಯಾವುದೇ ರಕ್ತಸಂಬಂಧವಿಲ್ಲ. ಆದರೂ, ನಕಲಿ ವಂಶವೃಕ್ಷ ಮತ್ತು ಮರಣ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಮೂಲ ಮಾಲೀಕರ ವಾರಸುದಾರರು ತಾವೇ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಜೊತೆಗೆ, ಯಾವುದೇ ಸ್ಥಳ ತನಿಖೆ ಅಥವಾ ಆಕ್ಷೇಪಣೆಗಳನ್ನು ಆಹ್ವಾನಿಸದೆ, ತರಾತುರಿಯಲ್ಲಿ ಪೌತಿ ಖಾತೆಯನ್ನು ಶಿವಮ್ಮ ಅವರ ಹೆಸರಿಗೆ ಅನುಮೋದಿಸಲಾಗಿತ್ತು. ಕಂದಾಯ ಇಲಾಖೆಯ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಮೇಲಧಿಕಾರಿಗಳವರೆಗೆ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮುಂದುವರೆದು, ಮೂಲ ರೈತರು ತಮ್ಮ ಜಮೀನಿನ ಪಹಣಿ (RTC) ಪರಿಶೀಲಿಸಿದಾಗ ಹೆಸರು ಬದಲಾಗಿರುವುದು ಕಂಡುಬಂದಿದ್ದು, ತಕ್ಷಣವೇ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ, ತನಿಖಾ ತಂಡದ ಮಧ್ಯಂತರ ವರದಿಯ ಆಧಾರದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಗ್ರಾಮ ಸಹಾಯಕಿ ಶಿವಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಜೊತೆಗೆ ಕಂದಾಯ ನಿರೀಕ್ಷಕ ಪ್ರಶಾಂತ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳಾದ ಮಂಜುಳಾ ಬಾಳವ್ವಗೋಡ ಮತ್ತು ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜೊತೆಗೆ, ಈ ಪ್ರಕರಣದಲ್ಲಿ ತಹಶೀಲ್ದಾರ್ ಮನೀಷಾ ಪತ್ರಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಏತನ್ಮಧ್ಯೆ, ಪ್ರಕರಣ ಬಯಲಾಗುತ್ತಿದ್ದಂತೆಯೇ ಮತ್ತೆ ಮೂಲ ರೈತರ ಹೆಸರಿಗೆ ಖಾತೆ ಬದಲಾಯಿಸಲಾಗಿದ್ದು, "ಪೌತಿ ಖಾತೆ ಮಾಡುವಾಗ ಆಟೋ ಮ್ಯುಟೇಷನ್ ತಾಂತ್ರಿಕ ದೋಷ ಮತ್ತು ಕಣ್ತಪ್ಪಿನಿಂದ ಈ ಬದಲಾವಣೆಯಾಗಿದೆ, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ" ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.