

ಬೆಂಗಳೂರು: ಬಸವ ಮಂಟಪ ಕೃತಿಯಲ್ಲಿ ಬಸವಣ್ಣರಿಗೆ ಅಪಮಾನ ಮಾಡಲಾಗಿದೆ ಎಂದು ಲಿಂಗಾಯಿತರ ಕಿಡಿಕಾರಿದ್ದಾರೆ. ಈ ಮಧ್ಯೆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿನ್ನೆ ಸಂಪುಟ ಸಮ್ಮತಿ ನೀಡಿತ್ತು. ಇದೀಗ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಮಹಾಸಭಾದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹೀಗಾಗಿ ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನದಿಂದ ಶಂಕರ ಬಿದರಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದೂರು ಸಲ್ಲಿಸಲಾಗಿದೆ. ಲೇಖಕ ರವಿ ಹಂಜ್ ಬರೆದಿರುವ ಬಸವ ಮಂಟಪ ಕೃತಿ ಲಿಂಗಾಯತರನ್ನ ಕೆರಳಿಸಿತ್ತು.
ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಿಗೆ ಶಂಕರ ಬಿದರಿ ವಿರುದ್ಧ ಬಿ.ಎಂ. ಸುಭಾಷ್‌ಚಂದ್ರ ಪತ್ರ ಬರೆದಿದ್ದಾರೆ. ಬಸವ ಮಂಟಪ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶಂಕರ ಬಿದರಿ ನಡೆದುಕೊಂಡ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮಹಾಸಭೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಕೀಯ ವಿಚಾರಗಳಲ್ಲಿ ಮಹಾಸಭೆಯ ಹೆಸರಿಗೆ ಮಸಿ ಬಳಿದಿದ್ದು, ಅವರ ನಡೆ ಸಂಘಟನೆಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಅವರನ್ನು ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನದಿಂದ ತಕ್ಷಣವೇ ವಜಾಗೊಳಿಸುವಂತೆ ಬಿಎಂ ಸುಭಾಷ್‌ಚಂದ್ರ ಪತ್ರದ ಮೂಲಕ ಒತ್ತಾಯಿಸಿದ್ದಾರೆ.