ಬೆಂಗಳೂರು: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಮತ್ತು ತಪ್ಪು ಮಾಹಿತಿ ಹರಡಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಹಾಗೂ ವಿಶೇಷ ತನಿಖಾ ತಂಡದ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಧರ್ಮಸ್ಥಳ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್, SIT ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ, ತನಿಖೆಯ ವೇಳೆ ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದ ಹಿನ್ನೆಲೆಯಲ್ಲಿ, ಸುಳ್ಳು ಸಾಕ್ಷ್ಯ ಸೃಷ್ಟಿ ಮತ್ತು ನಕಲಿ ದಾಖಲೆ ತಯಾರಿಕೆಯ ಸಂಘಟಿತ ಪಿತೂರಿಯ ಆರೋಪದಡಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತಾ ಭಟ್ ಸೇರಿದಂತೆ ಆರು ಜನರ ವಿರುದ್ಧ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಟ್ಟಣ್ಣನವರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವೇಳೆ, ಗಿರೀಶ್ ಮಟ್ಟಣ್ಣನವರ್ ಪರ ಹಿರಿಯ ವಕೀಲ ಎಸ್. ಬಾಲನ್ ಅವರು, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು; ಆದರೆ ಸರ್ಕಾರಿ ನೌಕರನಲ್ಲದ ಮುಸುಕುಧಾರಿ ಚಿನ್ನಯ್ಯ ದೂರು ನೀಡಿದ್ದಾರೆ ಎಂದು ವಾದಿಸಿ, ಅಸಂಜ್ಞೆಯ ಅಪರಾಧಕ್ಕೆ ಪೊಲೀಸರು ನೇರ ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದ್ದು, ದೂರುದಾರರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗುವಂತೆ ತಿಳಿಸಬೇಕಿತ್ತು ಎಂದರು. ಜೊತೆಗೆ, ವಿಚಾರಣೆಯ ನೆಪದಲ್ಲಿ ಅರ್ಜಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಎಸ್‌ಐಟಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದರು.
ಮತ್ತೊಂದೆಡೆ, ಎಸ್‌ಐಟಿ ಪರವಾಗಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ತನಿಖೆಯ ಹಂತದಲ್ಲಿ ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದಿಲ್ಲ; ಅವು ಆರೋಪಪಟ್ಟಿ ಸಲ್ಲಿಕೆಯಾದ ನಂತರ ಅನ್ವಯವಾಗುತ್ತವೆ. ಹಿಂದೆ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದ ಅರ್ಜಿದಾರರು, ಈಗ ತನಿಖೆ ತಮ್ಮ ಕಡೆ ತಿರುಗುತ್ತಿದ್ದಂತೆ ಎಫ್‌ಐಆರ್ ರದ್ದತಿಗೆ ಕೋರುತ್ತಿದ್ದಾರೆ ಎಂದು ವಾದಿಸಿದರು.
ಹೈಕೋರ್ಟ್ ತರಾಟೆ
ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರು, "ಒಂದೆಡೆ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ನೀವೇ ಒತ್ತಾಯಿಸುತ್ತೀರಿ, ಮತ್ತೊಂದೆಡೆ ತನಿಖೆ ನಡೆಯುತ್ತಿರುವಾಗಲೇ ಎಫ್‌ಐಆರ್ ರದ್ದುಗೊಳಿಸುವಂತೆ ಕೋರುತ್ತಿದ್ದೀರಿ" ಎಂದು ಪ್ರಶ್ನಿಸಿದರು. ಜೊತೆಗೆ, ಮೂಲ ಎಫ್‌ಐಆರ್ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದು, ತನಿಖೆಯಲ್ಲಿ ದೊರೆತ ಸಾಕ್ಷ್ಯದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್‌ಐಆರ್ ರದ್ದು ಕೋರುವುದು ಅಕಾಲಿಕ ಎಂದು ಪೀಠ ಸ್ಪಷ್ಟಪಡಿಸಿತು. ಇದೆ ವೇಳೆ, ನ್ಯಾಯಾಧೀಶರ ಕರ್ತವ್ಯವು ತಾವರೆ ಎಲೆಯ ಮೇಲಿನ ನೀರಿನಂತಿರಬೇಕು; ನೈತಿಕ ವಿಚಾರಗಳಿಂದ ಪ್ರಭಾವಿತವಾಗದೆ ಕೇವಲ ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಶ್ರೀಶಾನಂದ ಅಭಿಪ್ರಾಯಪಟ್ಟರು.