

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ಇಬ್ಬರೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ.
ಈ ದಂಪತಿ ಹಾಗೂ ಕುಟುಂಬಸ್ಥರ ನಡುವೆ ಕಳೆದ ಹಲವು ವರ್ಷಗಳಿಂದ ಕೌಟುಂಬಿಕ ಕಲಹವಿತ್ತು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.
ನಿರಂತರ ಜಗಳದಿಂದ ಮನನೊಂದ ಪತಿ ಅಪ್ಪಾಶಿ, ಇಂದು ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನೇಣಿಗೆ ಶರಣಾಗಿರುವುದನ್ನು ಕಂಡ ಪತ್ನಿ ರಾಜೇಶ್ವರಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಂತರ ಪತ್ನಿಯೂ ಕೋಣೆಯೊಳಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.
ಈ ದಂಪತಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಅಪ್ಪ-ಅಮ್ಮನ ಜಗಳದ ನಡುವೆ ಈಗ ಇಬ್ಬರೂ ಪೋಷಕರನ್ನು ಕಳೆದುಕೊಂಡು ಆ ಪುಟ್ಟ ಕಂದಮ್ಮಗಳು ಅನಾಥರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.