

ಬೆಂಗಳೂರು: ಅಕಾಲಿಕ ಮಳೆ ಮತ್ತು ಬೆಳೆ ನಷ್ಟದ ಪರಿಣಾಮವಾಗಿ ಕರ್ನಾಟಕದಾದ್ಯಂತ ಸಣ್ಣ ಈರುಳ್ಳಿ (ಸಾಂಬಾರ್ ಈರುಳ್ಳಿ) ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ದರ ಕೆ.ಜಿ.ಗೆ ₹200ರ ಗಡಿ ದಾಟಿದ್ದು, ಕಳೆದ 18 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸಾಮಾನ್ಯ ಈರುಳ್ಳಿಯ ಬೆಲೆ ಇದಕ್ಕೆ ಹೋಲಿಸಿದರೆ ಕೆ.ಜಿಗೆ ₹65ರಿಂದ ₹70ರಷ್ಟಿದೆ. ಸಗಟು ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಕೆ.ಜಿಗೆ ₹40ರಿಂದ ₹60ರ ದರದಲ್ಲಿ ಮಾರಾಟವಾಗುತ್ತಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಈರುಳ್ಳಿ ವ್ಯಾಪಾರಿ ರವಿ ಬಾಲಕೃಷ್ಣ ಅವರು ಮಾತನಾಡಿ, ಉತ್ಪಾದನಾ ಪ್ರದೇಶಗಳಿಂದ ಪೂರೈಕೆ ಕಡಿಮೆಯಾಗಿರುವುದರಿಂದ ಸಾಂಬಾರ್ ಈರುಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗಿದೆ. ನೆರೆಯ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿರುವುದು ಈರುಳ್ಳಿ ಕೊರತೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಕಳೆದ ಸುಮಾರು 18 ವರ್ಷಗಳಲ್ಲೇ ಸಣ್ಣ ಈರುಳ್ಳಿಗೆ ದಾಖಲಾಗಿರುವ ಅತ್ಯಧಿಕ ಬೆಲೆ ಇದಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಬೆಂಗಳೂರಿನ ಮಾರುಕಟ್ಟೆಗೆ ಪ್ರತಿದಿನ ಸುಮಾರು 1,000 ಟನ್ ಸಾಮಾನ್ಯ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಸಾಂಬಾರ್ ಈರುಳ್ಳಿ ಪೂರೈಕೆ ಕೆಲವೇ ಟನ್‌ಗಳಿಗೆ ಸೀಮಿತವಾಗಿದೆ. ನಗರದ ಬಹುತೇಕ ಸಣ್ಣ ಈರುಳ್ಳಿ ವ್ಯಾಪಾರ ವಹಿವಾಟು ಸಿಟಿ ಮಾರ್ಕೆಟ್‌ನಲ್ಲಿ ನಡೆಯುತ್ತದೆ. ತಮಿಳುನಾಡಿನ ನಾಮಕ್ಕಲ್ ಮತ್ತು ಪೆರಂಬಲೂರು ಜಿಲ್ಲೆಗಳ ರೈತರಿಂದ ಹೊಸೂರು ಮಾರ್ಗವಾಗಿ ಬೆಂಗಳೂರಿಗೆ ಈರುಳ್ಳಿ ಬರುತ್ತದೆ.
ಮುಂದಿನ ನಾಲ್ಕು ವಾರಗಳಲ್ಲಿ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆ ಹೆಚ್ಚಾಗಿಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಹೊಸ ದಾಸ್ತಾನು ಬಂದ ಬಳಿಕ, ಜನವರಿ ನಂತರ ಬೆಳೆ ಇಳುವರಿ ಸಹಜವಾಗಿದ್ದರೆ ಪ್ರತಿ ಕೆ.ಜಿಗೆ ₹100ರಿಂದ ₹130ರವರೆಗೆ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಾಂಬಾರ್ ಈರುಳ್ಳಿ ಸೀಮಿತ ಪ್ರಮಾಣದಲ್ಲಿ ಉತ್ಪಾದನೆಯಾಗುವ ವಿಶೇಷ ಬೆಳೆಯಾಗಿದ್ದು, ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಬೇಡಿಕೆ ಹೊಂದಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹಲವು ಅಡುಗೆಗಳಲ್ಲಿ ಇದನ್ನು ಬಳಸಲಾಗುತ್ತದೆ. ವಿಶೇಷವಾಗಿ ಚೆಟ್ಟಿನಾಡ್ ಶೈಲಿಯ ಖಾದ್ಯಗಳು ಹಾಗೂ ಇಡ್ಲಿ ಜೊತೆಗೆ ಬಡಿಸುವ ಸಾಂಬಾರ್ ತಯಾರಿಕೆಯಲ್ಲಿ ಸಣ್ಣ ಈರುಳ್ಳಿ ಪ್ರಮುಖ ಪದಾರ್ಥವಾಗಿದೆ.
ಸಣ್ಣ ಈರುಳ್ಳಿಯನ್ನು ಬಳಸುವ ದಕ್ಷಿಣ ಭಾರತೀಯ ಖಾದ್ಯಗಳ ಹೋಟೆಲ್‌ಗಳು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಒಂದು ಕೆ.ಜಿ. ಬಳಸುತ್ತಿದ್ದ ಕಡೆ ಈಗ ಕೇವಲ 100ರಿಂದ 250 ಗ್ರಾಂನಷ್ಟು ಮಾತ್ರ ಬಳಸುತ್ತಿದ್ದು, ಉಳಿದ ಪ್ರಮಾಣಕ್ಕೆ ಸಾಮಾನ್ಯ ಈರುಳ್ಳಿಯನ್ನು ಪರ್ಯಾಯವಾಗಿ ಬಳಸುತ್ತಿವೆ.
ರೆಸ್ಟೋರೆಂಟ್ ಮಾಲೀಕರ ಸಂಘದ ಸದಸ್ಯ ಸುಬ್ರಮಣ್ಯ ಹೊಳ್ಳ ಮಾತನಾಡಿ, ಅಡುಗೆಗೆ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಹೋಟೆಲ್‌ಗಳಲ್ಲಿಯೂ ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.