ಕೊಲೆಯಾದ ಮಹಿಳೆ ಜೀವಂತವಾಗಿ ಸಿಕ್ಕ ಬೆನ್ನಲ್ಲೇ ಪಾಂಡವಪುರ ಪೊಲೀಸರ ಕಳ್ಳಾಟ ಬಯಲು! ಕರೆಂಟ್ ಶಾಕ್ ನೀಡಿ ಅಮಾಯಕನ ಜೈಲಿಗಟ್ಟಿದ ಪೊಲೀಸರು

ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರು ಸುಳ್ಳು ಕೊಲೆ ಪ್ರಕರಣ ಸೃಷ್ಟಿಸಿ, ಅಮಾಯಕ ಕೂಲಿ ಕಾರ್ಮಿಕನಿಗೆ ಕರೆಂಟ್ ಶಾಕ್ ನೀಡಿ ತಪ್ಪೊಪ್ಪಿಗೆ ಪಡೆದು ಎರಡೂವರೆ ವರ್ಷ ಜೈಲಿಗೆ ಕಳುಹಿಸಿದ್ದ ಪ್ರಕರಣದ ಕಳ್ಳಾಟ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Woman Presumed Murdered 7 Years Ago Found Alive, Exposing Alleged Police Torture and Fabricated Case in Pandavapura
ಕೊಲೆಯಾದ ಮಹಿಳೆ ಜೀವಂತವಾಗಿ ಸಿಕ್ಕ ಬೆನ್ನಲ್ಲೇ ಪಾಂಡವಪುರ ಪೊಲೀಸರ ಕಳ್ಳಾಟ ಬಯಲು!Online Desk
Updated on: 

ಪಾಂಡವಪುರ (ಮಂಡ್ಯ): ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರು ಸುಳ್ಳು ಕೊಲೆ ಪ್ರಕರಣ ಸೃಷ್ಟಿಸಿ, ಅಮಾಯಕ ಕೂಲಿ ಕಾರ್ಮಿಕನಿಗೆ ಕರೆಂಟ್ ಶಾಕ್ ನೀಡಿ ತಪ್ಪೊಪ್ಪಿಗೆ ಪಡೆದು ಎರಡೂವರೆ ವರ್ಷ ಜೈಲಿಗೆ ಕಳುಹಿಸಿದ್ದ ಪ್ರಕರಣದ ಕಳ್ಳಾಟ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆ ಎಂದು ನಂಬಿಸಲಾಗಿದ್ದ ಮಹಿಳೆ ಇತ್ತೀಚೆಗೆ ಜೀವಂತವಾಗಿ ಪತ್ತೆಯಾದ ಬೆನ್ನಲ್ಲೇ, ಅಂದಿನ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯ ಕಟ್ಟುಕಥೆಗಳು ಹೊರಬಂದಿವೆ. ಆ ಕುರಿತ ವರದಿ ಇಲ್ಲಿದೆ:

ಅಮಾಯಕನಿಗೆ ಕರೆಂಟ್ ಶಾಕ್ ಟಾರ್ಚರ್

2019ರ ಜೂನ್‌ನಲ್ಲಿ ಪಾಂಡವಪುರ ಬಸ್ ನಿಲ್ದಾಣದಲ್ಲಿ ಪರಿಚಯವಿಲ್ಲದ ಮಹಿಳೆಯೊಬ್ಬರಿಗೆ (ಮಂಜು) ಕರೆ ಮಾಡಲು ಫೋನ್ ನೀಡಿದ್ದೇ ಕ್ವಾರಿ ಕಾರ್ಮಿಕ ರಾಜೇಶ್ ಮಾಡಿದ ತಪ್ಪಾಗಿತ್ತು. ಆ ಮಹಿಳೆಯ ಕೊನೆಯ ಕರೆ ರಾಜೇಶ್ ಫೋನ್‌ನಿಂದ ಹೋಗಿದ್ದ ಕಾರಣಕ್ಕೆ, 2021ರಲ್ಲಿ ಅಂದಿನ ಪಾಂಡವಪುರ ಇನ್‌ಸ್ಪೆಕ್ಟರ್ ಪ್ರಭಾಕರ್ ರಾಜೇಶ್‌ನನ್ನು ಅಕ್ರಮವಾಗಿ ಬಂಧಿಸಿದ್ದರು. ಠಾಣೆಯಲ್ಲಿ 15 ದಿನ ಅಕ್ರಮವಾಗಿ ಕೂಡಿಹಾಕಿ, ಬೂಟು ಕಾಲಿನಿಂದ ತುಳಿದು, ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜೇಶ್ ಆರೋಪಿಸಿದ್ದಾರೆ. ಕುಟುಂಬಸ್ಥರನ್ನೂ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದರಿಂದ, ಹಿಂಸೆ ತಾಳಲಾರದೆ ಪೊಲೀಸರು ಹೇಳಿಕೊಟ್ಟಂತೆ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾಗಿ ಅವರು ತಿಳಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ 'ಅಕ್ರಮ ಸಂಬಂಧ'ದ ಕಟ್ಟುಕಥೆ

ಮಹಿಳೆಯ ಶವವೇ ಪತ್ತೆಯಾಗದಿದ್ದರೂ, "ನನಗೂ ಮಂಜುಗೂ ಅಕ್ರಮ ಸಂಬಂಧವಿತ್ತು; ನನಗೆ ಮದುವೆ ನಿಶ್ಚಯವಾದಾಗ ಆಕೆ ವಿರೋಧಿಸಿದ್ದರಿಂದ ಸಿಟ್ಟಿಗೆದ್ದು ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಿದೆ. ಬಳಿಕ ಪರಿಚಯಸ್ಥರಾದ ಗುರುಕುಮಾರ್ ಮತ್ತು ಅನಂತಪದ್ಮನಾಭ ಎಂಬುವವರ ಬಳಿ ಈ ವಿಚಾರ ಹೇಳಿಕೊಂಡಿದ್ದೆ" ಎಂಬ ಕಟ್ಟುಕಥೆಯನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿ, ಮಡಿಕೇರಿ ಮತ್ತು ಶ್ರೀರಂಗಪಟ್ಟಣದಲ್ಲಿ ಬಲವಂತವಾಗಿ ಸ್ಥಳ ಮಹಜರು ಮಾಡಿಸಿದ್ದರು.

Woman Presumed Murdered 7 Years Ago Found Alive, Exposing Alleged Police Torture and Fabricated Case in Pandavapura
ಫೋನ್ ಕೊಟ್ಟು ಸಹಾಯ ಮಾಡಿದ್ದೇ ತಪ್ಪಾಯ್ತು! ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಜೀವಂತವಾಗಿ ಪತ್ತೆ; ಮಾಡದ ತಪ್ಪಿಗೆ 2.5 ವರ್ಷ ಜೈಲುವಾಸ ಅನುಭವಿಸಿದ ಯುವಕ..! Video

ಜೀವಂತವಾಗಿ ಪತ್ತೆಯಾದ ಮಹಿಳೆ

ಸುಳ್ಳು ಕೇಸ್‌ನಲ್ಲಿ ಬರೋಬ್ಬರಿ 2.5 ವರ್ಷ ಜೈಲುವಾಸ ಅನುಭವಿಸಿ 2024ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ರಾಜೇಶ್, ತನ್ನ ವಕೀಲರ ನೆರವಿನಿಂದ ಹುಡುಕಾಟ ನಡೆಸಿದಾಗ 2026ರ ನವೆಂಬರ್ 11ರಂದು ನಾಗಮಂಗಲದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದಾರೆ. ಇಷ್ಟವಿಲ್ಲದ ಮದುವೆ ತಪ್ಪಿಸಿಕೊಳ್ಳಲು ತಾನು ಪ್ರಿಯಕರನೊಂದಿಗೆ ಹೋಗಿ ಮದುವೆಯಾಗಿದ್ದಾಗಿ ಆಕೆ ನ್ಯಾಯಾಲಯ ಮತ್ತು ಪೊಲೀಸರ ಮುಂದೆ ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ತನಿಖೆಗೆ ಆದೇಶ

ನಿರಪರಾಧಿಗೆ ಜೈಲುಶಿಕ್ಷೆಯಾಗಲು ಕಾರಣವಾದ ಪೊಲೀಸರ ಲೋಪದೋಷ ಮತ್ತು ದೌರ್ಜನ್ಯದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾ ರಾಣಿ ಅವರು ಡಿವೈಎಸ್‌ಪಿ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ವೃತ್ತರಾಗಿರುವ ಅಂದಿನ ಇನ್‌ಸ್ಪೆಕ್ಟರ್ ಪ್ರಭಾಕರ್ ಹಾಗೂ ಸುಳ್ಳು ಸಾಕ್ಷಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ದೂರು ದಾಖಲಾಗಿದ್ದು, ತನಿಖಾ ತಂಡ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆಗೆ ಹಾಜರಾಗಲು ಅವರು 10 ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X