'ನಮ್ಮ ಪ್ರತಿಭಟನೆಗೆ ಚುನಾವಣಾ ಆಯೋಗ ಮಣಿದಿದೆ'; ಬಿಜೆಪಿ ನಾಯಕರು ರಾಜಕೀಯದಲ್ಲಿರಲು ನಾಲಾಯಕ್‌ಗಳು': ಡಿಕೆಶಿ

ನಾವು ಚುನಾವಣಾ ಆಯೋಗದ ಬಳಿ ಗುರುವಾರ ನಡೆಸಿದ ಪ್ರತಿಭಟನೆ ಫಲವಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದೆ ಎಂದು ಆದೇಶ ನೀಡಿದೆ ಎಂದು ತಿಳಿಸಿದರು.
DK Shivakumar
ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ, ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳುವಂತೆ ಚುನಾವಣಾ ಆಯೋಗವು ಎಲ್ಲ ರಾಜ್ಯಗಳ ಚುನಾವಣೆ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ನಿನ್ನೆ ರಾಜ್ಯ ಚುನಾವಣಾ ಆಯೋಗದ ಎದುರು ಧರಣಿ ನಡೆಸಿದ ಪರಿಣಾಮವಾಗಿ ಕೇಂದ್ರ ಚುನಾವಣೆ ಆಯೋಗವು ರಾತ್ರೋ ರಾತ್ರಿ ಹೋರಡಿಸಿರುವ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಪಕ್ಷ ಮತ್ತು ಸರ್ಕಾರದ ಗೆಲುವು ಮಾತ್ರವಲ್ಲ. ಇದು ಕರ್ನಾಟಕದ ಮತ್ತು ಇಡೀ ದೇಶದ ಮತದಾರರ ಗೆಲುವು. ಅರ್ಹ ಮತದಾರರ ಹಕ್ಕು ಕಸಿಯುವ ಸಂಚಿನ ವಿರುದ್ಧದ ಗೆಲುವು. ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಅದು ಮುಂದುವರೆಯಲಿದೆ' ಎಂದು ಹೇಳಿದರು.

'ನಾವು ಚುನಾವಣಾ ಆಯೋಗದ ಬಳಿ ಗುರುವಾರ ನಡೆಸಿದ ಪ್ರತಿಭಟನೆ ಫಲವಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದೆ. ಸಾಮೂಹಿಕವಾಗಿ ಹೆಸರು ತೆಗೆದು ಹಾಕಿರುವ ದೂರುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಆದೇಶ ನೀಡಿದೆ' ಎಂದು ತಿಳಿಸಿದರು.

'ಫಾರ್ಮ್ 7ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ತಿಳಿಸಿದ್ದಾರೆ. ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು. ಅದರಂತೆ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ. ಬಿಎಲ್ಒ ಏನು ಮಾಡಬೇಕು, ಫಾರ್ಮ್ 6 ಮತ್ತು ಫಾರ್ಮ್ 7 ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಬೇಕು. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದ್ದಾರೆ' ಎಂದು ವಿವರಿಸಿದರು.

DK Shivakumar
SIR ವಿವಾದ: ಫಾರ್ಮ್‌-6 ನಿಯಮ ಸರಳಗೊಳಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ವಿಶೇಷ ಅಭಿಯಾನಕ್ಕೆ ಸೂಚನೆ..!

ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ಸಲ್ಲಿಸಿದ್ದಾರೆ. ಇದು ನಾಚಿಕೆ ಗೇಡಿನ ಸಂಗತಿ. ನಮ್ಮ ನಡುವಿನ ಇತರೇ ಸಮುದಾಯಗಳು, ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ. ಇಂತಹವರು ರಾಜಕೀಯದಲ್ಲಿರಲು ನಾಲಾಯಕ್‌ಗಳು' ಎಂದು ಕಿಡಿಕಾರಿದರು.

ಚುನಾವಣಾ ಆಯೋಗದ ಬಳಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಕೇಳಿದಾಗ, 'ಬಿಜೆಪಿಯವರು ಪ್ರತಿಭಟನೆ ನಡೆಸಲು ನಾಚಿಕೆಯಾಗಬೇಕು. ಸುಮಾರು 25,000 ಅರ್ಜಿಗಳನ್ನು ನೀಡಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಅವರು ಮಾಡಿರುವ ಅಪರಾಧ ಮತ್ತು ಷಡ್ಯಂತ್ರಗಳನ್ನು ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಚುನಾವಣಾ ಆಯೋಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಿಸಬೇಕು. ಈ ದಾಖಲೆಯನ್ನು ಯಾರು ಹಂಚಿಕೊಂಡಿದ್ದಾರೋ ಅವರು ಅದನ್ನು ಈಗಾಗಲೇ ಒಪ್ಪಿಕೊಂಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದರು

'ಬಿಜೆಪಿಯವರು ಜನರ ಹೃದಯ ಗೆದ್ದು ಚುನಾವಣೆ ಎದುರಿಸಬಹುದಿತ್ತು. 'ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕಾದರೆ ಮೆದುಳನ್ನು ಬಳಸಿ, ಇತರರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಬಳಸಿ' ಎಂದು ಮಹಾತ್ಮ ಗಾಂಧೀಜಿಯವರು ಒಮ್ಮೆ ಹೇಳಿದ್ದರು. ಅವರು ಈ ದೇಶದ ಜನರ ಹೃದಯವನ್ನು ಗೆದ್ದು ಚುನಾವಣೆ ಎದುರಿಸಬಹುದಿತ್ತು. ಅದರ ಬದಲಾಗಿ, ಮತಗಳನ್ನು ತೆಗೆದು ಹಾಕುವ ಕ್ರಿಮಿನಲ್ ಕೆಲಸಕ್ಕೆ ಇಳಿದಿದ್ದಾರೆ' ಎಂದು ಕಿಡಿಕಾರಿದರು.

ಗುರುವಾರ ರಾತ್ರಿ 11 ಗಂಟೆಗೆ, ಚುನಾವಣೆ ಆಯೋಗ ನಮ್ಮ ಹೋರಾಟದ ಹಿಂದಿನ ವಿಚಾರಗಳ ಗಂಭೀರತೆ ಅರಿತುಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ಸಂವಿಧಾನಾತ್ಮಕ ಸಂಸ್ಥೆ. ನಮ್ಮ ವಿನಂತಿ, ಬೇಡಿಕೆ ಹಾಗೂ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಮನವರಿಕೆ ಮಾಡಿಕೊಟ್ಟ ನಂತರ, ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ. ಜೊತೆಗೆ ಪ್ರತಿಯೊಂದು ಪ್ರಕರಣಗಳನ್ನು ಆಳವಾಗಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಇದು ಸ್ವಾಗತಾರ್ಹ. ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಬೇಕು ಎಂದರು.

ನನಗೆ ಈ ಅಕ್ರಮದ ಬಗ್ಗೆ ತಿಳಿದಾಗ ಕಾಂಗ್ರೆಸ್ ಕಾರ್ಯಕರ್ತರ ಹೊರತಾಗಿ, ಒಂದು ವಿಶೇಷ ತಂಡವನ್ನು ನೇಮಿಸಿದೆ. 'ಸಿಟಿಜನ್ಸ್ ಫೋರಂ' ಮತ್ತು ಹೋರಾಟಗಾರರು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ದತ್ತಾಂಶ ಸಂಗ್ರಹಿಸಿ ವರದಿ ನೀಡಿದ್ದಾರೆ. ಅದನ್ನು ನನ್ನ ಸ್ವಂತ ಮೂಲಗಳಿಂದಲೂ ಪರಿಶೀಲಿಸಿದ್ದೇನೆ. ನಾನು ತಳಮಟ್ಟದ ರಾಜಕಾರಣಿ ಎಂದು ಹೇಳಿದರು.

ಮತದಾನದ ಹಕ್ಕು ಈ ದೇಶದ ಜನರ ಬದುಕುವ ಹಕ್ಕು. ಆದ್ದರಿಂದ ಇದು ಡಿಕೆ ಶಿವಕುಮಾರ್ ಅವರ ವಿಜಯವಲ್ಲ, ಇದು ಈ ದೇಶದ ಮತದಾರರ ವಿಜಯ. ರಾಹುಲ್ ಗಾಂಧಿಯವರು ಕೈಗೊಂಡ ದೊಡ್ಡ ಆಂದೋಲನದ ಫಲ, ಇದು ಅವರ ಗೆಲುವೂ ಆಗಿದೆ. ಅವರು ಕಾರ್ಯಕಾರಿ ಸಮಿತಿಯಲ್ಲಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಅವರು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಬಂದು ಮತಗಳ್ಳತನದ ವಿರುದ್ದ ಹೋರಾಟ ಪ್ರಾರಂಭಿಸಿದರು' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com