

ಬೆಂಗಳೂರು: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಯಿಂದ ಮಾನಸಿಕ ಕಿರುಕುಳಕ್ಕೊಳಗಾದ 35 ವರ್ಷದ ಆಟೋ ಚಾಲಕ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯ ಸಹೋದರ ಅಂಬರೀಶ್ ಅವರು ನೀಡಿರುವ ದೂರಿನ ಪ್ರಕಾರ, ಮುನಿಕೃಷ್ಣ ಅವರಿಗೆ ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿತ್ತು. ಅವರ ಪತ್ನಿ ನಾಗದೇವನಹಳ್ಳಿಯವರು. ದಂಪತಿಗೆ ಆರು ವರ್ಷದ ಮಗನಿದ್ದು, ಪತ್ನಿ ಈಗ ಮತ್ತೆ ಗರ್ಭಿಣಿಯಾಗಿದ್ದಾರೆ.
ಮುನಿಕೃಷ್ಣ ಪತ್ನಿ ಕುಮಾರ್ ಎಂಬಾತನೊಂದಿಗೆ ಸುಮಾರು ಒಂದು ವರ್ಷದಿಂದ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಮಾರ್, ಮುನಿಕೃಷ್ಣ ಅವರ ಫೋನ್‌ಗೆ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಸೆಪ್ಟೆಂಬರ್ 27 ರಂದು ಸಂಜೆ 4 ಗಂಟೆ ಸುಮಾರಿಗೆ, ಕುಮಾರ್ ದೇವಾಲಯವೊಂದರ ಬಳಿ ಮುನಿಕೃಷ್ಣ ಅವರನ್ನು ತಡೆದು ನಿಲ್ಲಿಸಿ ನಿಂದಿಸಿದ್ದಾನೆ. ತನ್ನ ಪತ್ನಿ ಗರ್ಭ ಧರಿಸಿರುವ ಮಗು ತನ್ನದು ಎಂದು ಹೇಳಿಕೊಂಡ ಕುಮಾರ್, ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ನೋಡಿದ ನಂತರವೂ ಇನ್ನೂ ಏಕೆ ಬದುಕಿದ್ದೀಯಾ ಎಂದು ವ್ಯಂಗ್ಯವಾಡಿದ್ದನು.
ಈ ಮಾತುಗಳು ಮುನಿಕೃಷ್ಣ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡಿದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಗೆ ಮರಳಿದ ನಂತರ, ಅವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಇಡೀ ಘಟನೆಯನ್ನು ವಿವರಿಸಿ ತಮಗೆ ಬದುಕುವ ಇಚ್ಛೆಯಿಲ್ಲ ಎಂದು ಹೇಳಿದ್ದರು. ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಸಂಬಂಧಿಕರು ಸಲಹೆ ನೀಡಿದ್ದರು. ಮರುದಿನ ಬೆಳಿಗ್ಗೆ (ಸೆಪ್ಟೆಂಬರ್ 28) ಅವರು ಮುನಿಕೃಷ್ಣ ಅವರ ಮನೆಗೆ ಭೇಟಿ ನೀಡಿ ಮತ್ತೆ ಸಮಾಧಾನಪಡಿಸಿದ್ದರು.
ಆದರೆ ಅದೇ ದಿನ ಸಂಜೆ, ಮುನಿಕೃಷ್ಣ ಮನೆಯಿಂದ ಹೊರಬಾರದಿದ್ದಾಗ ಸಂಬಂಧಿಕರು ಹೋಗ್ ನೋಡಿದ್ದಾರೆ. ಬಾಗಿಲು ಲಾಕ್ ಆಗಿರುವುದನ್ನು ಕಂಡು ಕಿಟಕಿಯ ಮೂಲಕ ನೋಡಿದಾಗ, ಮುನಿಕೃಷ್ಣ ಅವರು ಪಂಚೆಯನ್ನು ಬಳಸಿ ಸೀಲಿಂಗ್ ಪೈಪ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಬಾಗಿಲನ್ನು ಒಡೆದು ನೋಡಿದಾಗ ಮುನಿಕೃಷ್ಣ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು.
ಮಂಗಳವಾರ ಕುಮಾರ್ ಮತ್ತು ಮೃತರ ಪತ್ನಿಯ ವಿರುದ್ಧ ದೂರು ದಾಖಲಿಸಲಾಗಿದೆ. ಇಬ್ಬರ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕುಮಾರ್ ತಲೆಮರೆಸಿಕೊಂಡಿದ್ದಾನೆ ಮತ್ತು ಮಹಿಳೆ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ಇನ್ನೂ ಬಂಧಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.