ಪ್ರವಾಸಿಗರಿಗೆ ಗುಣಮಟ್ಟದ ಆಹಾರ: ಹಸಿವು ನೀಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ ‘ಮಯೂರ ರುಚಿ ಆನ್ ವೀಲ್ಸ್’ ಸೇವೆ ಆರಂಭ..!

ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಇನ್ಮುಂದೆ ಗುಣಮಟ್ಟದ ಮತ್ತು ಸ್ವಚ್ಛವಾದ ಆಹಾರಕ್ಕಾಗಿ ಪರದಾಡುವ ಚಿಂತೆ ಪಡಬೇಕಿಲ್ಲ. ಪ್ರವಾಸಿಗರಿಗೆ ಅತ್ಯುತ್ತಮ ಹಾಗೂ ಕೈಗೆಟುಕುವ ದರದಲ್ಲಿ ಆಹಾರ ಒದಗಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) "ಮಯೂರ ರುಚಿ ಆನ್ ವೀಲ್ಸ್" (Mayura Ruchi on Wheels) ಎಂಬ ವಿನೂತನ ಸಂಚಾರಿ ಆಹಾರ ಟ್ರಕ್ (Food Truck) ಯೋಜನೆಯನ್ನು ಜಾರಿಗೆ ತರುತ್ತಿದೆ.

ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಂಡಳಿ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಅಕ್ಟೋಬರ್ 5ರಿಂದ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತಿದ್ದು, ನವೆಂಬರ್ ಮೂರನೇ ವಾರದ ವೇಳೆಗೆ ಆಹಾರ ಟ್ರಕ್‌ಗಳನ್ನು ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ ಎಂದು KSTDC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ. ಅಗತ್ಯ ವಸ್ತುಗಳಿಗಾಗಿ ಪ್ರವಾಸಿ ತಾಣಗಳ ಸುತ್ತಮುತ್ತಲಿನ ರೆಸ್ಟೋರೆಂಟ್‌ಗಳೊಂದಿಗೆ ನಿರ್ವಾಹಕರು ಸಹಭಾಗಿತ್ವ ಮಾಡಲಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.

ಪ್ರತಿ ಆಹಾರ ಟ್ರಕ್‌ಗೆ ಸುಮಾರು 30 ಲಕ್ಷ ರೂ, ವೆಚ್ಚವಾಗುವ ನಿರೀಕ್ಷೆಯಿದೆ. ಪ್ರತಿ ಪ್ರವಾಸಿ ತಾಣದಲ್ಲಿ KSTDC ಒಂದು ಆಹಾರ ಟ್ರಕ್‌ನ್ನು ನಿರ್ವಹಿಸಲಿದೆ. ಪ್ರಾಯೋಗಿಕ ಯೋಜನೆಯನ್ನು ಹಂಪಿ, ನಂದಿ ಬೆಟ್ಟ, ಬೆಂಗಳೂರು ಮತ್ತು ಮೈಸೂರಿನಲ್ಲಿ ಆರಂಭಿಸಲಾಗುವುದು. ಬಳಿಕ ಮಡಿಕೇರಿ ಹಾಗೂ ಜೋಗ ಜಲಪಾತಕ್ಕೂ ವಿಸ್ತರಿಸಲಾಗುತ್ತದೆ.

ಆಹಾರ ಟ್ರಕ್‌ಗಳಲ್ಲಿ ಸ್ಯಾಂಡ್‌ವಿಚ್, ಫ್ರೈಸ್, ಬರ್ಗರ್, ಪಿಜ್ಜಾ, ಐಸ್‌ಕ್ರೀಂ ಸೇರಿದಂತೆ ದಕ್ಷಿಣ ಭಾರತದ ಉಪಾಹಾರಗಳಾದ ಇಡ್ಲಿ, ವಡೆ, ದೋಸೆ, ಕೆಲವು ಅನ್ನದ ಖಾದ್ಯಗಳು, ಚಹಾ ಮತ್ತು ಕಾಫಿ ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.

File photo
ಆಧ್ಯಾತ್ಮದ ಆಲಯ, ಪ್ರಕೃತಿಯ ಅದ್ಭುತ ಸಂಗಮ: ಶೃಂಗೇರಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಏಕೆ?

ಇದೇ ವೇಳೆ ಬೆಂಗಳೂರು ಮತ್ತು ಮೈಸೂರಿನ ಉದಾಹರಣೆ ನೀಡಿದ ಅವರು, ಲಾಲ್‌ಬಾಗ್, ಕಬ್ಬನ್ ಪಾರ್ಕ್, ಅರಮನೆ ಮೈದಾನ, ಕಡಲೆಕಾಯಿ ಪರಿಷೆ, ಮೈಸೂರು ಅರಮನೆ ಸೇರಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಫುಡ್ ಟ್ರಕ್‌ಗಳು ಸಂಚರಿಸಲಿವೆ ಎಂದು ಹೇಳಿದ್ದಾರೆ.

ಪ್ರವಾಸಿ ತಾಣ ಮತ್ತು ಅಲ್ಲಿ ಸೇರುವ ಜನರ ಸಂಖ್ಯೆಯನ್ನು ಆಧರಿಸಿ ಆಹಾರ ಪಟ್ಟಿಯನ್ನು ಬದಲಾಯಿಸಲು ಅವಕಾಶವಿರುತ್ತದೆ. ಆಹಾರ ಟ್ರಕ್‌ಗಳಲ್ಲಿ ಸಂಪೂರ್ಣ ಸಸ್ಯಾಹಾರಿ ಖಾದ್ಯಗಳನ್ನಷ್ಟೇ ನೀಡಲಾಗುವುದು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಪ್ರಾದೇಶಿಕ ಖಾದ್ಯಗಳಿಗೆ ಆದ್ಯತೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲು ಸಾಧ್ಯವಾಗದ ಪ್ರವಾಸಿ ತಾಣಗಳಲ್ಲಿ ಸರ್ಕಾರಿ ಸಂಸ್ಥೆಯೇ ಆಹಾರ ಟ್ರಕ್‌ಗಳನ್ನು ನಿರ್ವಹಿಸುವ ದೇಶದ ಮೊದಲ ಯೋಜನೆ ಇದಾಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಆಹಾರ ಟ್ರಕ್‌ಗಳ ಕಾರ್ಯನಿರ್ವಹಣೆಯ ಸಮಯವೂ ಸ್ಥಳಕ್ಕೆ ಅನುಗುಣವಾಗಿ ಬದಲಾಗಲಿದೆ. ಉದಾಹರಣೆಗೆ, ನಂದಿ ಬೆಟ್ಟಕ್ಕೆ ಮುಂಜಾನೆ ತೆರಳುವ ಪ್ರವಾಸಿಗರು ಬೆಟ್ಟದ ತಪ್ಪಲಿನಲ್ಲಿ ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಲ್ಲುವುದರಿಂದ, ಅವರಿಗೆ ಬಿಸಿ ಆಹಾರ ಒದಗಿಸಲು ಕೆಲ ಟ್ರಕ್‌ಗಳು ಬೆಳಗಿನ ಜಾವ 3 ಗಂಟೆಯಿಂದಲೇ ಕಾರ್ಯನಿರ್ವಹಿಸಲಿವೆ.

ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಪ್ರವಾಸೋದ್ಯಮದ ಅನುಭವದಲ್ಲಿ ಆಹಾರವೂ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

‘ಮಯೂರ ರುಚಿ ಆನ್ ವೀಲ್ಸ್’ ಮೂಲಕ KSTDCಯ ಆತಿಥ್ಯ ಸೇವೆಗಳನ್ನು ಪ್ರವಾಸಿಗರ ಬಳಿಗೆ ಇನ್ನಷ್ಟು ಹತ್ತಿರವಾಗಿ ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com