

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ವೊಂದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ. ಆತ ಪೋಸ್ಟ್ ಹಾಕಿದ ಕೆಲವೇ ಸಮಯದಲ್ಲಿ ಆತನ ಸ್ನೇಹಿತರು ಅದಕ್ಕೆ ಕಾಮೆಂಟ್ ಮಾಡಿದ್ದರು. ಈ ಪೋಸ್ಟ್ ವಿರೋಧಿಗಳ ಗಮನಕ್ಕೂ ಬಂದಿತ್ತು.
ಸೆಪ್ಟೆಂಬರ್ 29ರಂದು ಅವರು ಅಪ್ರಾಪ್ತನನ್ನು ಹೋಟೆಲ್‌ವೊಂದರ ಬಳಿ ಬರುವಂತೆ ಕರೆಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವೇಳೆ ಆ ಪ್ರದೇಶದಲ್ಲಿ ತಮ್ಮದೇ ಮಾತು ನಡೆಯುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡಿದ್ದ ಅಪ್ರಾಪ್ತನು ಅಕ್ಟೋಬರ್ 1ರಂದು ತನ್ನ ಮೇಲೆ ಹಲ್ಲೆ ನಡೆಸಿದ್ದ ಗುಂಪಿನಲ್ಲಿದ್ದ ಬಾಲಕನೊಬ್ಬನನ್ನು ಅಪಹರಿಸಿದ್ದಾನೆ. ಬಳಿಕ ಆತನಿಗೆ ಮನಬಂದಂತೆ ಥಳಿಸಿ, ಹುಬ್ಬಳ್ಳಿ ಹೊರವಲಯದಲ್ಲಿರುವ ಕೆಎಲ್‌ಇ ಆಸ್ಪತ್ರೆಗೆ ತಂದು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಲಾಗುತ್ತಿದೆ. ಅಪಹರಣಕ್ಕೊಳಗಾದ ಬಾಲಕನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಕ್ಕಳ ತಜ್ಞ ಕವನ ದೇಶಪಾಂಡೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಹಾಗೂ ಪೋಷಕರ ಮೇಲ್ವಿಚಾರಣೆಯ ಕೊರತೆಯಿಂದ ಇಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಹಾಗೂ ಇತರ ಗ್ಯಾಜೆಟ್‌ಗಳನ್ನು ಉತ್ತಮ ವಿಚಾರಗಳನ್ನು ಕಲಿಯಲು ಬಳಸಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಇಲ್ಲದಿದ್ದರೆ, ಇನ್ನೂ ಪ್ರಬುದ್ಧತೆ ಹೊಂದಿರದ ಮನಸ್ಸುಗಳು ಇಂತಹ ಅಪಾಯಕಾರಿ ಬಲೆಗೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.