‘ಲಂಚ ಕೊಡದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇನೆ’: ಬೆದರಿಕೆ ಹಾಕಿ 3 ಸಾವಿರ ರೂ. ಲಂಚ ಪಡೆಯುತ್ತಿದ್ದ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ..!

ಪ್ರತಿ ಭಾನುವಾರ ಠಾಣೆಗೆ ತೆರಳಿ ಹಾಜರಾತಿ ನೀಡಬೇಕಿದ್ದ ಜಾಮೀನು ಷರತ್ತನ್ನು ಸಡಿಲಿಸುವುದಕ್ಕಾಗಿ ಕಾನ್‌ಸ್ಟೆಬಲ್ ರೂ.3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
File photo
ಲಂಚ (ಸಾಂದರ್ಭಿಕ ಚಿತ್ರ )
Updated on: 

ಕಲಬುರಗಿ: ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನಿನ ನಿಯಮಗಳನ್ನು ಸಡಿಲಗೊಳಿಸಲು ರೂ.3,000 ಲಂಚ ಸ್ವೀಕರಿಸುತ್ತಿದ್ದ ಸುಳೇಪೇಟೆ ಪೊಲೀಸ್ ಠಾಣೆಯ ಸ್ಟೇಷನ್ ರೈಟರ್, ಕಾನ್ಸ್ಟೇಬಲ್ ಅನಿಲ್ ಕುಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಇಂದು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಕಾನ್‌ಸ್ಟೆಬಲ್‌ನನ್ನು ಬಲೆಗೆ ಬೀಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಡಿಕೇಶ್ವರ ಗ್ರಾಮದ ಚಂದ್ರಕಾಂತ್ ರಂಗನೂರು ನೀಡಿದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.

ಪ್ರತಿ ಭಾನುವಾರ ಠಾಣೆಗೆ ತೆರಳಿ ಹಾಜರಾತಿ ನೀಡಬೇಕಿದ್ದ ಜಾಮೀನು ಷರತ್ತನ್ನು ಸಡಿಲಿಸುವುದಕ್ಕಾಗಿ ಕಾನ್‌ಸ್ಟೆಬಲ್ ರೂ.3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರುದಾರರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಪ್ರತಿ ತಿಂಗಳು ಸುಲೇಪೇಟೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು ಎಂದು ತಿಳಿದುಬಂದಿದೆ.

File photo
2.5 ಲಕ್ಷ ರೂ ಲಂಚ ಪ್ರಕರಣ: DGCA ಅಧಿಕಾರಿ, ವಿಮಾನಯಾನ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿದ ಸಿಬಿಐ

ಆದರೆ, ಸುಲೇಪೇಟೆ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಅನಿಲ್ ಕುಮಾರ್, ಚಂದ್ರಕಾಂತ್ ಪ್ರತಿ ಭಾನುವಾರ ಠಾಣೆಗೆ ಬಂದು ಹಾಜರಾತಿ ನೀಡಬೇಕು ಎಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಲಂಚದ ಹಣ ನೀಡದಿದ್ದರೆ ಜಾಮೀನು ರದ್ದುಗೊಳಿಸಿ ಮತ್ತೆ ಜೈಲಿಗೆ ಕಳುಹಿಸುವುದಾಗಿ ಕಾನ್‌ಸ್ಟೆಬಲ್ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ನಡುವೆ ಲೋಕಾಯುಕ್ತ ಪೊಲೀಸರ ಸಲಹೆಯಂತೆ ಚಂದ್ರಕಾಂತ್ ಅವರು ಅನಿಲ್ ಕುಮಾರ್ ಅವರನ್ನು ಸಂಪರ್ಕಿಸಿ ಲಂಚದ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಬಳಿಕ ಅನಿಲ್ ಕುಮಾರ್, ಮಧ್ಯವರ್ತಿ ಕೃಷ್ಣ ಅವರ ಮೊಬೈಲ್ ಸಂಖ್ಯೆಗೆ ಫೋನ್‌ಪೇ ಮೂಲಕ ಹಣ ಕಳುಹಿಸುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ.

ಚಂದ್ರಕಾಂತ್ ಹಣವನ್ನು ಕಳುಹಿಸಿದ ಬಳಿಕ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅನಿಲ್ ಕುಮಾರ್ ಹಾಗೂ ಮಧ್ಯವರ್ತಿ ಕೃಷ್ಣ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com