ನಷ್ಟದ ಹಾದಿಯಿಂದ ಲಾಭದತ್ತ ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ: ಸೆಪ್ಟೆಂಬರ್‌ನಲ್ಲಿ 1.96 ರೂ. ಕೋಟಿ ಲಾಭ..!

ಜುಲೈನಲ್ಲಿ ರೂ.33 ಲಕ್ಷ, ಆಗಸ್ಟ್‌ನಲ್ಲಿ ರೂ.1.71 ಕೋಟಿ ಹಾಗೂ ಸೆಪ್ಟೆಂಬರ್‌ನಲ್ಲಿ ರೂ.1.96 ಕೋಟಿ ನಿವ್ವಳ ಲಾಭವನ್ನು ಕಾರ್ಖಾನೆ ದಾಖಲಿಸಿದೆ.
Visvesvaraya steel plant
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ
Updated on: 

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸತತ ಮೂರನೇ ತಿಂಗಳೂ ಲಾಭ ದಾಖಲಿಸಿದ್ದು, ನಷ್ಟದಲ್ಲಿದ್ದ ಘಟಕದ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜುಲೈನಲ್ಲಿ ರೂ.33 ಲಕ್ಷ, ಆಗಸ್ಟ್‌ನಲ್ಲಿ ರೂ.1.71 ಕೋಟಿ ಹಾಗೂ ಸೆಪ್ಟೆಂಬರ್‌ನಲ್ಲಿ ರೂ.1.96 ಕೋಟಿ ನಿವ್ವಳ ಲಾಭವನ್ನು ಕಾರ್ಖಾನೆ ದಾಖಲಿಸಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಸುಧಾರಣಾ ಕ್ರಮಗಳು, ನಿರಂತರ ಮೇಲ್ವಿಚಾರಣೆ ಹಾಗೂ ಕಾರ್ಖಾನೆಗೆ ಆಗಾಗ್ಗೆ ಭೇಟಿ ನೀಡಿರುವುದು ಈ ಸುಧಾರಣೆಗೆ ಕಾರಣ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಕಾರ್ಯಕ್ಷಮತೆ ಆಶಾದಾಯಕವಾಗಿದ್ದು, ಕಾರ್ಮಿಕರ ಬದ್ಧತೆ ಮತ್ತು ಸಾಮೂಹಿಕ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

Visvesvaraya steel plant
ಶೋಭಾ ಅಪಾರ್ಟ್‌ಮೆಂಟ್‌ಗೂ ಡಿಕೆಶಿಗೂ ಏನು ಸಂಬಂಧ? ಶಿಶುಪಾಲನ ಕಥೆಯಂತಾಯಿತು: ಎಚ್‌.ಡಿ ಕುಮಾರಸ್ವಾಮಿ ವ್ಯಂಗ್ಯ

ಸೆಪ್ಟೆಂಬರ್‌ನಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ನಿವ್ವಳ ಆದಾಯ ರೂ.51.87 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಆದಾಯ ರೂ.27.48 ಕೋಟಿಯಾಗಿತ್ತು. 2025ರ ಸೆಪ್ಟೆಂಬರ್‌ನಲ್ಲಿ ಕಾರ್ಖಾನೆ ರೂ.3.78 ಕೋಟಿ ನಿವ್ವಳ ನಷ್ಟ ದಾಖಲಿಸಿತ್ತು. 2026ರ ಸೆಪ್ಟೆಂಬರ್‌ವರೆಗೆ ಘಟಕದ ಒಟ್ಟು ನಿವ್ವಳ ನಷ್ಟ ರೂ.2.03 ಕೋಟಿಯಷ್ಟಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾಗಿದ್ದ ರೂ.22.77 ಕೋಟಿ ನಷ್ಟಕ್ಕೆ ಹೋಲಿಸಿದರೆ ಗಮನಾರ್ಹ ಸುಧಾರಣೆಯಾಗಿದೆ.

ರೂ.20 ಕೋಟಿಗೂ ಅಧಿಕ ಸುಧಾರಣೆಯಾಗಿರುವುದು ಕಾರ್ಖಾನೆಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನು ತೋರಿಸುತ್ತದೆ. ಈ ಸಾಧನೆ ಕಾರ್ಮಿಕರ ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಈ ಆಶಾದಾಯಕ ಫಲಿತಾಂಶಕ್ಕಾಗಿ ಕಾರ್ಮಿಕರು ಹಾಗೂ ಕಾರ್ಖಾನೆಯ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕಾರ್ಖಾನೆಯ ಕಾರ್ಯಕ್ಷಮತೆಯ ಈ ವೇಗವನ್ನು ಮುಂದುವರಿಸುವಂತೆ ಹಾಗೂ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿ, ಕಾರ್ಖಾನೆಗೆ ಮತ್ತಷ್ಟು ಬಲಿಷ್ಠ ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುವಂತೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಮಿಕರಿಗೆ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com