ಸೈಟ್ ಕ್ಲೀನಿಂಗ್ ಡ್ರೈವ್: 2 ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ; 372 ಮಾಲೀಕರಿಗೆ ನೋಟಿಸ್..!

ವಸತಿ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳು ಕಸದ ತಾಣಗಳಾಗಿ ಹಾಗೂ ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಯಾಗದಂತೆ ತಡೆಯುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ.
Before (L) and after cleaning of a large vacant plot in Begur.
ಬೇಗೂರಿನಲ್ಲಿ ದೊಡ್ಡ ಖಾಲಿ ಜಾಗವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ.
Updated on: 

ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭಿಸಿರುವ ‘ತ್ಯಾಜ್ಯ ಮುಕ್ತ’ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಳೆದ ಎರಡು ತಿಂಗಳಲ್ಲಿ ಗುರುತಿಸಲಾಗಿದ್ದ 1,242 ಖಾಲಿ ನಿವೇಶನಗಳ ಪೈಕಿ 709 ನಿವೇಶನಗಳನ್ನು ಸ್ವಚ್ಛಗೊಳಿಸಿದೆ.

ವಸತಿ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳು ಕಸದ ತಾಣಗಳಾಗಿ ಹಾಗೂ ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಯಾಗದಂತೆ ತಡೆಯುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ ಎಂದು ಆಯುಕ್ತ ಕೆ.ಎನ್‌. ರಮೇಶ್ ತಿಳಿಸಿದ್ದಾರೆ. ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಸ್ವಚ್ಛತೆ ಕಾಪಾಡಿಕೊಳ್ಳಲು ವಿಫಲವಾಗುವ ನಿವೇಶನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಠಿಣ ಕ್ರಮ ಆರಂಭಿಸಿದ್ದು, ಈವರೆಗೆ 372 ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಖಾಲಿ ನಿವೇಶನಗಳಿಗೆ ಕಸ ಹಾಗೂ ತ್ಯಾಜ್ಯ ಎಸೆಯುವುದನ್ನು ತಡೆಯಲು ಮಾಲೀಕರು ಸೂಕ್ತ ತಂತಿ ಬೇಲಿ ಅಳವಡಿಸಬೇಕು ಮತ್ತು ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ನಗರವನ್ನು ಸ್ವಚ್ಛವಾಗಿಡುವ ಪಾಲಿಕೆಯ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Before (L) and after cleaning of a large vacant plot in Begur.
ಟ್ರಾಫಿಕ್, ಕಸ ಬೆಂಗಳೂರಿನ ಟಾಪ್ 2 ಸಮಸ್ಯೆ; ಕಸದ ವಾರ್ಡನ್ ನೇಮಕ ಮಾಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

ವಿಭಾಗವಾರು ವಿವರ:

ದಕ್ಷಿಣ: 518 ನಿವೇಶನಗಳ ಪೈಕಿ ಮಾಲೀಕರೇ 305 ನಿವೇಶನಗಳನ್ನು ಹಾಗೂ ಪಾಲಿಕೆ 13 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 200 ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. 93 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಬೊಮ್ಮನಹಳ್ಳಿ: 498 ನಿವೇಶನಗಳ ಪೈಕಿ ಮಾಲೀಕರು 276 ನಿವೇಶನಗಳನ್ನು ಹಾಗೂ ಪಾಲಿಕೆ ಒಂದು ನಿವೇಶನವನ್ನು ಸ್ವಚ್ಛಗೊಳಿಸಿದೆ. 140 ನಿವೇಶನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಬಿಟಿಎಂ: 111 ನಿವೇಶನಗಳ ಪೈಕಿ ಮಾಲೀಕರು 23 ಹಾಗೂ ಪಾಲಿಕೆ ಐದು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 83 ನಿವೇಶನಗಳ ಪೈಕಿ 62 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಪದ್ಮನಾಭನಗರ: 62 ನಿವೇಶನಗಳ ಪೈಕಿ ಮಾಲೀಕರು 38 ಹಾಗೂ ಪಾಲಿಕೆ 18 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಇನ್ನೂ ಆರು ನಿವೇಶನಗಳನ್ನು ಸ್ವಚ್ಛಗೊಳಿಸಬೇಕಿದೆ. 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಜಯನಗರ: 53 ನಿವೇಶನಗಳ ಪೈಕಿ ಮಾಲೀಕರು 26 ಹಾಗೂ ಪಾಲಿಕೆ ನಾಲ್ಕು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 23 ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 42 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

X
Kannada Prabha
www.kannadaprabha.com