RSS ಮಾನಹಾನಿ ಕೇಸ್: ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಬಿಗ್ ರಿಲೀಫ್, ವಿಚಾರಣೆ ಕೋರ್ಟ್ ತಡೆಯಾಜ್ಞೆ

ಜೂನ್ 27ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಿಯಾಂಕ್ ಖರ್ಗೆ ಅವರ ವಾದವನ್ನು ತಿರಸ್ಕರಿಸಿತ್ತು. RSS ನೋಂದಾಯಿತ ಸಂಘಟನೆಯಲ್ಲ ಮತ್ತು ಯಾವುದೇ ನೋಂದಾಯಿತ ಸದಸ್ಯತ್ವ ವ್ಯವಸ್ಥೆಯನ್ನೂ ಹೊಂದಿಲ್ಲ.
Home Minister Priyank Kharge
ಗೃಹ ಸಚಿವ ಪ್ರಿಯಾಂಕ್ ಖರ್ಗೆ
Updated on: 

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಬೆಂಗಳೂರಿನ ಜನಪ್ರನಿಧಿಗಳ ವಿಶೇಷ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಂಸದರು ಹಾಗೂ ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ ಈ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ನಗರದ 42ನೇ ಎಸಿಜೆಎಂ ನ್ಯಾಯಾಲಯವು ಮಾನಹಾನಿ ಆರೋಪಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಪರಿಗಣಿಸಿ, ಸಮನ್ಸ್ ಜಾರಿ ಮಾಡಿ, ದೂರುದಾರರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಆರಂಭಿಸಿತ್ತು.

ಈ ಆದೇಶದ ಆಧಾರದ ಮೇಲೆ ನಡೆಯುತ್ತಿರುವ ಮುಂದಿನ ಎಲ್ಲಾ ವಿಚಾರಣೆಗಳಿಗೆ ಅಕ್ಟೋಬರ್ 30ರಂದು ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ.

ಜೂನ್ 27ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಿಯಾಂಕ್ ಖರ್ಗೆ ಅವರ ವಾದವನ್ನು ತಿರಸ್ಕರಿಸಿತ್ತು. RSS ನೋಂದಾಯಿತ ಸಂಘಟನೆಯಲ್ಲ ಮತ್ತು ಯಾವುದೇ ನೋಂದಾಯಿತ ಸದಸ್ಯತ್ವ ವ್ಯವಸ್ಥೆಯನ್ನೂ ಹೊಂದಿಲ್ಲ. ಹೀಗಾಗಿ RSS ಸದಸ್ಯರಿಗೆ ಮಾನಹಾನಿ ದೂರು ಸಲ್ಲಿಸುವ ಹಕ್ಕು ಇಲ್ಲ ಎಂದು ಖರ್ಗೆ ವಾದಿಸಿದ್ದರು.

ಕಾಂಗ್ರೆಸ್ ನಾಯಕರ ಪರ ವಾದ ಮಂಡಿಸಿದ ಹಿರಿಯ ವಕೀಲರು, ದೂರು ದಾಖಲಿಸಿರುವ ಬೆಂಗಳೂರಿನ ಆರ್‌ಎಸ್‌ಎಸ್ ಕಾರ್ಯಕರ್ತ ತೇಜಸ್ ಎ. ಅವರಿಗೆ ಈ ಪ್ರಕರಣ ದಾಖಲಿಸಲು ಕಾನೂನುಬದ್ಧ ಹಕ್ಕಿಲ್ಲ (Locus Standi) ಎಂದು ವಾದಿಸಿದರು. ತೇಜಸ್ ಅವರು ಆರ್‌ಎಸ್‌ಎಸ್ ಸಂಘಟನೆಯಲ್ಲಿ ತಮ್ಮ ಅಧಿಕೃತ ಸದಸ್ಯತ್ವದ ಬಗ್ಗೆ ಯಾವುದೇ ನಿಖರ ದಾಖಲೆಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

Home Minister Priyank Kharge
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ; ದಲಿತರು, ಮುಸ್ಲಿಮರೇ ಟಾರ್ಗೆಟ್: ತನ್ವೀರ್ ಸೇಠ್ ಗಂಭೀರ ಆರೋಪ

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 356 ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ನೇರವಾಗಿ ತೊಂದರೆಗೆ ಒಳಗಾದ ನಿರ್ದಿಷ್ಟ "ಬಾಧಿತ ವ್ಯಕ್ತಿ" ಮಾತ್ರ ದೂರು ನೀಡಬಹುದು. ಯಾವುದೇ ಒಂದು ಸಂಘಟನೆಯ ಅನಿರ್ದಿಷ್ಟ ಗುಂಪಿನ ಸದಸ್ಯರು ದೂರು ನೀಡಲು ಬರುವುದಿಲ್ಲ ಎಂದು ಉಲ್ಲೇಖಿಸಿದರು.

ದೂರುದಾರರಾದ ತೇಜಸ್ ಎ. ಅವರು RSS ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ತಾವು RSS ಸದಸ್ಯರಾಗಿರುವುದನ್ನು ಸಾಬೀತುಪಡಿಸುವ ಯಾವುದೇ ಸೂಕ್ತ ದಾಖಲೆಗಳನ್ನು ಅವರು ಸಲ್ಲಿಸಿಲ್ಲ. ದೂರುದಾರರು ಸಲ್ಲಿಸಿರುವ ಛಾಯಾಚಿತ್ರಗಳು ಅವರು ನೀಡಿರುವ ಪ್ರಮಾಣಪತ್ರದೊಂದಿಗೆ ಹೊಂದಿಕೆಯಾಗುವುದಿಲ್ಲ. ಆ ಛಾಯಾಚಿತ್ರಗಳು RSS ಜೊತೆಗಿನ ಅವರ ಸಂಬಂಧವನ್ನು ಸಾಬೀತುಪಡಿಸುವುದಿಲ್ಲ ಎಂದು ವಾದಿಸಿದರು.

ಒಂದೇ ದೂರಿನಲ್ಲಿ ವಿಭಿನ್ನ ಕಾರಣಗಳನ್ನು ಒಟ್ಟುಗೂಡಿಸಿ ದೂರು ಸಲ್ಲಿಸಿರುವುದು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಮಾನಹಾನಿ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರು ಸಲ್ಲಿಸಲು ದೂರುದಾರರಿಗೆ ಕಾನೂನುಬದ್ಧ ಹಕ್ಕು ಇಲ್ಲ, ಭಾರತೀಯ ನ್ಯಾಯ ಸಂಹಿತೆಯ (BNSS) ಸೆಕ್ಷನ್ 356ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಮಾನಹಾನಿಯಿಂದ ನೇರವಾಗಿ ಬಾಧಿತ ವ್ಯಕ್ತಿ ಸಲ್ಲಿಸುವ ದೂರಿನ ಆಧಾರದ ಮೇಲಷ್ಟೇ ನ್ಯಾಯಾಲಯ ಅಪರಾಧವನ್ನು ಪರಿಗಣಿಸಬೇಕಿತ್ತು.

ದೂರುದಾರರ ಅರ್ಹತೆ ಅಥವಾ ದೂರು ಸಲ್ಲಿಸುವ ಹಕ್ಕಿನ ಪ್ರಶ್ನೆಯನ್ನು ಮೊದಲು ನಿರ್ಧರಿಸದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅಪರಾಧಗಳನ್ನು ಪರಿಗಣಿಸಿ, ಈ ವಿಚಾರವನ್ನು ವಿಚಾರಣೆ ಸಂದರ್ಭದಲ್ಲಿ ನಿರ್ಧರಿಸಬೇಕಿದೆ ಎಂದು ಹೇಳಿರುವುದು ಕಾನೂನುಬಾಹಿರ.

ಅಪರಾಧಗಳನ್ನು ಪರಿಗಣಿಸಲು ಕಾರಣಗಳೇನು ಎಂಬುದನ್ನು ಪ್ರಶ್ನಾರ್ಹ ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ವಿವರಿಸಿಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ ಮತ್ತು ನಲಪಾಡ್ ವಿರುದ್ಧ ಹೊರಡಿಸಿರುವ ಆದೇಶ ಕಾನೂನಿನ ದೃಷ್ಟಿಯಿಂದ ಸಮರ್ಥನೀಯವಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com