

ಮೈಸೂರು: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾರ್ತಿಕ್(32) ತಪ್ಪಿತಸ್ಥ ಎಂದು ಮೈಸೂರು ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರು ಶೀಘ್ರಗತಿ ವಿಶೇಷ ನ್ಯಾಯಾಲಯ, ಕಾಮುಕ ಕಾರ್ತಿಕ್ ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಿದೆ. ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು ವಿಶೇಷ.
ಕಳೆದ ವರ್ಷ ದಸರಾ ಹಿನ್ನೆಲೆಯಲ್ಲಿ ಕುಟುಂಬವೊಂದು ಗುಲ್ಬರ್ಗಾದಿಂದ ಮೈಸೂರಿಗೆ ಬಲೂನ್ ಮಾರಲು ಬಂದಿತ್ತು. ಆ ಕುಟುಂಬ ದಸರಾ ವಸ್ತುಪ್ರದರ್ಶನ ಬಳಿ ಟೆಂಟ್ನಲ್ಲಿ ಮಲಗಿದ್ದಾಗ 9 ವರ್ಷದ ಬಾಲಕಿಯನ್ನು ಕಾರ್ತಿಕ್ ಎಳೆದೊಯ್ದು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಿದ್ದನು.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಟಿವಿ ದೃಶ್ಯ ಆಧಾರಿಸಿ ಕಾರ್ತಿಕ್ ನನ್ನು ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲಿ ಬಂಧಿಸಿದ್ದರು.
ಇನ್ನು ಈ ಕಾರ್ತಿಕ್ ಮೈಸೂರಿನ ಸಿದ್ದಲಿಂಗಪುರದ ನಿವಾಸಿ ಆಗಿದ್ದು, ಮೈಸೂರು-ಕೊಳ್ಳೇಗಾಲ ಮಾರ್ಗದ ಬಸ್ನಲ್ಲಿ ಕ್ಲೀನರ್ ಕೂಡ ಆಗಿದ್ದ. ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾರ್ತಿಕ್ ಅಪರಾಧಿ ಎಂದು ಸಾಬೀತಾಗಿದೆ.