ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ನಿರ್ಗಮಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾ ಯಾದವ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರು.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
Updated on: 

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರು ಇಂದು ಶುಕ್ರವಾರ ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ನಿರ್ಗಮಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾ ಯಾದವ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರು.

ಸುಧಾ ಯಾದವ್ ಅವರು ಕರ್ನಾಟಕದ ರಾಜ್ಯಪಾಲ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ. ಇದಕ್ಕೂ ಮೊದಲು ವಿ.ಎಸ್. ರಮಾದೇವಿ ಅವರು 1999ರಿಂದ 2002ರವರೆಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ಕಾರ್ಗಿಲ್ ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಸುಧಾ ಯಾದವ್

ಸುಧಾ ಯಾದವ್ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಡೆಪ್ಯುಟಿ ಕಮಾಂಡೆಂಟ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡುತ್ತಿದ್ದಾಗ ನಡೆದ ಫಿರಂಗಿ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದರು. ಮರಣೋತ್ತರವಾಗಿ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿತ್ತು. ಪತಿಯ ನಿಧನದ ಬಳಿಕ ಸುಧಾ ಯಾದವ್ ಅವರು ಸಾರ್ವಜನಿಕ ಜೀವನ ಪ್ರವೇಶಿಸಿದರು.

1999ರಲ್ಲಿ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು, 2004ರವರೆಗೆ ಸಂಸತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದರು.

ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಸುಧಾ ಯಾದವ್ ಅವರು, ಪ್ರಸ್ತುತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರೂರ್ಕಿ ಎಂದು ಕರೆಯಲಾಗುವ ಅಂದಿನ ರೂರ್ಕಿ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು ಚಿನ್ನದ ಪದಕವನ್ನೂ ಗಳಿಸಿದ್ದರು.

ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಅನುಭವ

ಸುಧಾ ಯಾದವ್ ಅವರು ಭಾರತೀಯ ಜನತಾ ಪಕ್ಷದಲ್ಲಿ ಹಲವು ಸಂಘಟನಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪಕ್ಷದ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ (ಒಬಿಸಿ ಮೋರ್ಚಾ) ರಾಷ್ಟ್ರೀಯ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

2022ರಲ್ಲಿ ಅವರನ್ನು ಬಿಜೆಪಿಯ ಸಂಸದೀಯ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಈ ಮೂಲಕ ಸುಷ್ಮಾ ಸ್ವರಾಜ್ ಬಳಿಕ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಕೆ.ಜೆ. ಜಾರ್ಜ್ ಮತ್ತು ಪ್ರಿಯಾಂಕ್ ಖರ್ಗೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಶಾಸಕರು, ಸಂಸದರು, ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com