ಸರ್ಕಾರಿ ನೌಕರಿ ಅವಧಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ?: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು HDK ಹೊಸ ಚಿಂತನೆ!

ಸರ್ಕಾರಿ ಉದ್ಯೋಗದ ಯೋಗವನ್ನು ಎಲ್ಲರಿಗೂ ಕಲ್ಪಿಸಲು ಸರ್ಕಾರಿ ನೌಕರಿಯ ಅವಧಿಯನ್ನೇ 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಚಿಂತನೆ ಇದೆ.
H D Kumaraswamy
ಎಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೊಸ ಚಿಂತನೆಯೊಂದನ್ನು ಹರಿಬಿಟ್ಟಿದ್ದಾರೆ.

ಹೌದು, ಸಾಮಾನ್ಯವಾಗಿ ಎಲ್ಲರೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಾರೆ ಮತ್ತು ಜೀವನವನ್ನು ಉತ್ತಮವಾಗಿ ಸಾಗಿಸಬೇಕೆಂದರೆ ಸರ್ಕಾರಿ ಕೆಲಸದ ಅವಶ್ಯಕತೆ ಇದೆ ಎನ್ನುವುದು ನಮ್ಮ ಜನರ ನಂಬಿಕೆಯಾಗಿದೆ. ಆದರೆ ಸರ್ಕಾರಿ ಕೆಲಸ ಮತ್ತು ಸರ್ಕಾರಿ ಸಂಬಳವನ್ನು ಪಡೆಯಲು ಯೋಗ ಇರಬೇಕು ಎನ್ನುವ ಮಾತಿದೆ.

ಸರ್ಕಾರಿ ಉದ್ಯೋಗದ ಯೋಗವನ್ನು ಎಲ್ಲರಿಗೂ ಕಲ್ಪಿಸಲು ಸರ್ಕಾರಿ ನೌಕರಿಯ ಅವಧಿಯನ್ನೇ 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಚಿಂತನೆ ಇದೆ. ಹೀಗೆ ಮಾಡಿದ್ರೆ ಪ್ರತಿ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ? ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದ್ದಾರೆ.

H D Kumaraswamy
'ಬಲಿತ ದಲಿತ'ನೇ.., ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಕುಮಾರಸ್ವಾಮಿ ಅವರು, ಇಂದು ವಿಜಯನಗರದ ಬಂಟರ ಭವನದಲ್ಲಿ, ವಿದ್ಯಾರ್ಥಿಗಳು, ಯುವಕರು, ಕೆಪಿಎಸ್ ಸಿ ಆಯ್ಕೆಯಲ್ಲಿ ಮೋಸ ಹೋದವರು, ಭವಿಷ್ಯದ ಕನಸು ಹೊತ್ತವರು, ಉದ್ಯೋಗ ವಂಚಿತರ ಜೊತೆ ನೇರ ಸಂವಾದ ನಡೆಸಿದರು.

ಈ ವೇಳೆ ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಕಾರ್ಯಕ್ರಮವಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ಸರ್ಕಾರಿ ನೌಕರರು ಒಮ್ಮೆ ಆಯ್ಕೆಯಾದರೆ 30ರಿಂದ 35 ವರ್ಷಗಳ ಕಾಲ ಖಾಯಂ ಉದ್ಯೋಗದಲ್ಲಿರುತ್ತಾರೆ. ಒಬ್ಬ ವ್ಯಕ್ತಿಗೆ ಇಷ್ಟು ವರ್ಷ ಉದ್ಯೋಗ ಸಿಕ್ಕಾಗ ಆ ವ್ಯಕ್ತಿ ಮತ್ತು ಆತನ ಕುಟುಂಬ ಚೆನ್ನಾಗಿರುತ್ತದೆ. ಆದರೆ ಉದ್ಯೋಗ ಸಿಗದವರು ಏನು ಮಾಡಬೇಕು? ಅಷ್ಟೊತ್ತಿಗೆ ಅವರಿಗೂ ವಯಸ್ಸಾಗಿರುತ್ತದೆ. ಸರ್ಕಾರಿ ಕೆಲಸವೂ ಸಿಗುವುದಿಲ್ಲ. ಹೀಗಾಗಿ ಪ್ರತಿ ಕುಟುಂಬಕ್ಕೆ 1 ಸರ್ಕಾರಿ ಉದ್ಯೋಗ ಸಿಗಲೇಬೇಕೆಂಬ ಕಾರ್ಯಕ್ರಮ ಕೊಡಬೇಕು ಅಂದುಕೊಂಡಿದ್ದೇನೆ ಎಂದರು.

ಮುಂದುವರಿದು… ಸರ್ಕಾರಿ ಉದ್ಯೋಗದ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಯೋಜನೆಯಿದೆ. ಒಬ್ಬ ವ್ಯಕ್ತಿ 10 ರಿಂದ 15 ವರ್ಷ ಕೆಲಸ ಮಾಡಿದ ಬಳಿಕ ನಿವೃತ್ತಿ ನೀಡಿದರೆ, ಆ ಸ್ಥಾನದಲ್ಲಿ ಮತ್ತೊಬ್ಬರಿಗೆ ಉದ್ಯೋಗ ನೀಡಬಹುದು. ನಿವೃತ್ತಿಯಾದವರಿಗೆ ಪಿಂಚಣಿ ಸಿಗುವುದರಿಂದ ಅವರೂ ಬದುಕಬಹುದು. ಜೊತೆಗೆ ಖಾಸಗಿ ಉದ್ಯೋಗವನ್ನೂ ಮಾಡಬಹುದು. ಉದ್ಯೋಗದಿಂದ ವಂಚಿತರಾದ ಮತ್ತೊಬ್ಬರಿಗೂ ಕೆಲಸ ಸಿಗುತ್ತದೆ. ಈ ರೀತಿಯ ವ್ಯವಸ್ಥೆ ಜಾರಿಗೆ ತಂದರೆ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಯೋಚನೆ ಮಾಡಿ, ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ ಎಂಬುದರ ಕುರಿತು ನಿಮ್ಮ ಅಭಿಪ್ರಾಯ ತಿಳಿಸುವಂತೆ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.

ಇದಕ್ಕೂ ಮುನ್ನ, 2028ರ ವೇಳೆಗೆ ಜನತೆಯ ಮುಂದಿಡಲು ಕೆಲವು ಕಾರ್ಯಕ್ರಮಗಳಿವೆ. ನನ್ನ ಕಾರ್ಯಕ್ರಮ 2,000 ರೂಪಾಯಿ ಕೊಡುವುದಾಗಲಿ, ಉಚಿತ ಬಸ್‌ ಸೌಲಭ್ಯ ಕಲ್ಪಿಸುವುದಾಗಲಿ ಅಥವಾ ಯುವನಿಧಿ ನೀಡುವುದಾಗಲಿ ಅಲ್ಲ. 5 ಗ್ಯಾರಂಟಿಗಳಿಗೂ ನನ್ನ ವಿರೋಧವಿಲ್ಲ. ಆದರೆ ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com