

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಶನಿವಾರ ಈರುಳ್ಳಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇಡೀ ಲಾರಿ ಈರುಳಿ ಜನರ ಪಾಲಾಗಿದೆ.
ಇಂದು ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜನರ ವರ್ತನೆ ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ಗೆ ನೆರವಾಗುವ ಬದಲು, ಅಲ್ಲಿದ್ದ ಈರುಳ್ಳಿ ಚೀಲಗಳನ್ನ ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ. ಮಾನವೀಯತೆಯನ್ನೇ ಮರೆತು, ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚಿದ್ದಾರೆ.
ಕೇವಲ 15 ರಿಂದ 20 ನಿಮಿಷಗಳಲ್ಲೇ ದೊಡ್ಡ ಲಾರಿಯಲ್ಲಿದ್ದ ಸಂಪೂರ್ಣ ಈರುಳ್ಳಿ ಲೋಡ್ ಖಾಲಿಯಾಗಿದೆ. ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗಿದ್ದು, ಅಪಘಾತದ ಸ್ಥಳದಲ್ಲಿ ಮಾನವೀಯತೆಗಿಂತ ಈರುಳ್ಳಿಯೇ ಮುಖ್ಯವಾದಂತಾಗಿದೆ.
ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.