ಮೈಸೂರು: ಅಪ್ರಾಪ್ತೆ ಅತ್ಯಾಚಾರ ಕೇಸ್ ನಂತರ ಎಚ್ಚೆತ್ತ ಜಿಲ್ಲಾಡಳಿತ; ಆರು ದಿನಗಳಲ್ಲಿ 30 ವಲಸೆ ಮಕ್ಕಳ ರಕ್ಷಣೆ!

ದಸರಾ ಉತ್ಸವದ ಸಂದರ್ಭದಲ್ಲಿ ನಗರಕ್ಕೆ ವಲಸೆ ಬರುವ ಕುಟುಂಬಗಳ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗಾಗಿ ವಿಶೇಷ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಕೇವಲ ಆರು ದಿನಗಳಲ್ಲಿ ಬಲವಂತದ ದುಡಿಮೆ ಹಾಗೂ ಇತರೆ ಸಂಕಷ್ಟಗಳಿಂದ 30 ಮಕ್ಕಳನ್ನು ರಕ್ಷಿಸಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on: 

ಮೈಸೂರು: ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತವು, ಹಬ್ಬಕ್ಕಾಗಿ ನಗರಕ್ಕೆ ವಲಸೆ ಬರುವ ಕುಟುಂಬಗಳೊಂದಿಗೆ ಆಗಮಿಸುವ ಮಕ್ಕಳ ರಕ್ಷಣೆಗಾಗಿ ನಿಗಾ ಮತ್ತು ಜಾಗರೂಕತೆಯನ್ನು ಹೆಚ್ಚಿಸಿದೆ.

ದಸರಾ ಉತ್ಸವದ ಸಂದರ್ಭದಲ್ಲಿ ನಗರಕ್ಕೆ ವಲಸೆ ಬರುವ ಕುಟುಂಬಗಳ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗಾಗಿ ವಿಶೇಷ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಕೇವಲ ಆರು ದಿನಗಳಲ್ಲಿ ಬಲವಂತದ ದುಡಿಮೆ ಹಾಗೂ ಇತರೆ ಸಂಕಷ್ಟಗಳಿಂದ 30 ಮಕ್ಕಳನ್ನು ರಕ್ಷಿಸಲಾಗಿದೆ.

ದಸರಾ ಉತ್ಸವದ ಸಮಯದಲ್ಲಿ ಬಲೂನ್, ಆಟಿಕೆಗಳು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಲು ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಬೀದರ್ ಮತ್ತು ವಿಜಯಪುರ ಸೇರಿದಂತೆ ರಾಜಸ್ಥಾನ, ಜಾರ್ಖಂಡ್‌, ಬಿಹಾರ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಿಂದ ನೂರಾರು ವಲಸೆ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಮೈಸೂರಿಗೆ ಆಗಮಿಸುತ್ತವೆ.

ಇಂತಹ ಮಕ್ಕಳ ಮೇಲೆ ನಡೆಯಬಹುದಾದ ಶೋಷಣೆ, ದೌರ್ಜನ್ಯ ಹಾಗೂ ನಿರ್ಲಕ್ಷ್ಯವನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

Representational image
SIR ಎಫೆಕ್ಟ್: ಸುಗ್ಗಿಯ ಸಮಯದಲ್ಲಿ ಕಾಫಿ ಕೊಯ್ಲು ಬಿಟ್ಟು ತೆರಳುತ್ತಿರುವ ವಲಸೆ ಕಾರ್ಮಿಕರು; ಇಕ್ಕಟ್ಟಿನಲ್ಲಿ ಎಸ್ಟೇಟ್ ಮಾಲೀಕರು!

ರಕ್ಷಿಸಲಾದ ಮಕ್ಕಳನ್ನು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ದಾಖಲಿಸಿ, ಅವರ ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಉತ್ಸವ ಮುಗಿಯುವವರೆಗೆ ಈ ವಿಶೇಷ ನಿಗಾ ಹಾಗೂ ರಕ್ಷಣಾ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com