

ವಿಜಯಪುರ: ತಮ್ಮ ಹೊಸ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ ಕಾರ್ಮಿಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಮಹಿಳೆ, ಪ್ರಿಯರಕನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ವಿಜಯಪುರದಲ್ಲಿ ನಡೆದಿದೆ.
ಪತಿ ರಾಜಶೇಖರ್ ನನ್ನು ಎಸ್‌ಯುವಿ(SUV) ಕಾರು ಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಆತನ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆನಂದ್ ಕಲ್ಲೂರ(25) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಅಪ್ರಾಪ್ತನೂ ಸೇರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಶೇಖರ್ ಬಿರಾದಾರ ಮತ್ತು ಅಶ್ವಿನಿ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಅವರಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಅವರು ವಿಜಯಪುರದ ಏಕತಾ ನಗರದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅಕ್ಟೋಬರ್ 4 ರಂದು ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ರಸ್ತೆ ಅಪಘಾತ ಪ್ರಕರಣವೊಂದರ ತನಿಖೆಯ ವೇಳೆ ಈ ಕೊಲೆ ಬೆಳಕಿಗೆ ಬಂದಿದೆ.
ರಾಜಶೇಖರ್ ಹಾಗೂ ಅಶ್ವಿನಿ ಮಧ್ಯೆ ಸಾಮರಸ್ಯವಿರಲಿಲ್ಲ. ಈ ಮಧ್ಯೆ ರಾಜಶೇಖರ್ ನೂತನವಾಗಿ ಮನೆ ಕಟ್ಟಿಸಿದ್ದರು. ಮನೆಯ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ ಮದೀನಾ ನಗರ ನಿವಾಸಿ ಆನಂದ್ ಕಲ್ಲೂರ, ಅಶ್ವಿನಿಗೆ ಪರಿಚಯವಾಗಿದ್ದ. ಇವರಿಬ್ಬರ ಪರಿಚಯ ಮುಂದೆ ಪ್ರೀತಿಗೆ ತಿರುಗಿದೆ. ‘ಅಶ್ವಿನಿ ನನ್ನ ಗಂಡನನ್ನು ಮುಗಿಸಿ ಬಿಡೋಣ, ನಂತರ ನಾನು-ನೀನು ಜೊತೆಯಾಗಿರೋಣ’ ಎಂದು ಆನಂದ್ಗೆ ಹೇಳಿದ್ದಳಂತೆ. ಆನಂದ್ ಸಹ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ರಾಜಶೇಖರ್ ಕೊಲೆ ಮಾಡಿ ಇಡೀ ಆಸ್ತಿ ಹೊಡೆಯಲು ಮುಂದಾಗಿದ್ದ ಎನ್ನಲಾಗಿದೆ.
ಅಕ್ಟೋಬರ್ 4 ರಂದು ಬೆಳಿಗ್ಗೆ ಸುಮಾರು 5:30 ರ ಸುಮಾರಿಗೆ ರಾಜಶೇಖರ್ ಎಂದಿನಂತೆ ವಾಕಿಂಗ್ಗೆ ತೆರಳಿದ್ದರು. ತಕ್ಷಣ ಈ ವಿಚಾರವನ್ನು ಅಶ್ವಿನಿ ಆನಂದ್ಗೆ ತಿಳಿಸಿದ್ದಾರೆ. ಅತ್ತ ಆನಂದ್ ತನ್ನದೇ ಏರಿಯಾದ ಸಹಚರರಾದ ಓರ್ವ ಅಪ್ರಾಪ್ತ ಬಾಲಕ ಹಾಗೂ ಸಚಿನ್ ಬಡಳ್ಳಿಗೆ ಮೊದಲೇ ಪ್ಲ್ಯಾನ್ ಮಾಡಿದಂತೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬರಲು ಹೇಳಿ, ತಾನು ರೀಂಗ್ ರೋಡ್ ಬಳಿಯ ಜುಮನಾಳ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ.
ಇದೇ ವೇಳೆ ಜಮನಾಳದತ್ತ ರಾಜಶೇಖರ್ ನಡೆದುಕೊಂಡು ಹೋಗುತ್ತಿರುವುದನ್ನ ಕಂಡ ಆನಂದ್ ಈತನ ಮೇಲೆ ವಾಹನ ಚಲಾಯಿಸಿ ಬಿಡಿ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಸಚಿನ್ಗೆ ಹೇಳುತ್ತಾನೆ. ಆಗ ಸಚಿಸ್ ಬಡಳ್ಳಿ ವೇಗವಾಗಿ ಸ್ಕಾರ್ಪಿಯೋ ಚಲಾಯಿಸಿಕೊಂಡು ರಾಜಶೇಖರ್ಗೆ ಡಿಕ್ಕಿ ಹೊಡೆಯುತ್ತಾನೆ. ಡಿಕ್ಕಿಯ ರಭಸಕ್ಕೆ ರಾಜಶೇಖರ್ನನ್ನ ನೂರು ಅಡಿ ದೂರ ಎಳೆದುಕೊಂಡ ಹೋಗಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಅಪರಿಚತ ವಾಹನ ಡಿಕ್ಕಿಯಾಗಿ ನನ್ನ ಪತಿ ಮೃತಪಟ್ಟಿದ್ದಾರೆಂದು ಅಶ್ವಿನಿ ಪೊಲೀಸ್ ಠಾಣೆಗೆ ದೂರು ನೀಡಿ ಸುಮ್ಮನಿರುತ್ತಾಳೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ಕೈಗೊಂಡಾಗ, ಸ್ವತಃ ಪತ್ನಿಯೇ ಸಂಚು ರೂಪಿಸಿ ಕೊಲೆ ಮಾಡಿಸಿರುವುದು ಬಯಲಾಗಿದೆ.