

ಬೆಂಗಳೂರು: ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ವಿಮಾನದಲ್ಲಿದ್ದ ಎಲ್ಲಾ 148 ಪ್ರಯಾಣಿಕರು ಯಾವುದೇ ಗಾಯಗಳಾಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಹೊರತಾಗಿಯೂ ವಿಮಾನ ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದ್ದು, ಲ್ಯಾಂಡಿಂಗ್ ನಂತರ ಪಾರ್ಕಿಂಗ್ ಸ್ಟ್ಯಾಂಡ್‌ಗೆ ಸ್ಥಳಾಂತರಿಸಲಾಯಿತು.
ಪ್ರಮಾಣಿತ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿ, ವಿಮಾನ ನಿಲ್ದಾಣದಲ್ಲಿದ್ದ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ತಂಡಗಳು ವಿಮಾನ ಅಥವಾ ಎಂಜಿನ್‌ಗಳಿಗೆ ಯಾವುದೇ ಸಂಭಾವ್ಯ ಹಾನಿಯಾಗದಂತೆ ಕ್ರಮ ವಹಿಸಿದ್ದಾರೆ. ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಶನಿವಾರ ಕೂಡಾ ಇಂತಹುದೇ ಘಟನೆ ನಡೆದಿತ್ತು. ದುಬೈನಿಂದ ಹೊರಟ ಎಮಿರೇಟ್ಸ್ ವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವಾಗ "ಹಕ್ಕಿ ಡಿಕ್ಕಿ" ಹೊಡೆದ ಬಳಿಕ ವಿಳಂಬವಾಗಿತ್ತು. ಮಧ್ಯಾಹ್ನ 3.10 ರ ಸುಮಾರಿಗೆ ಟರ್ಮಿನಲ್ 3 ಬಳಿ ರನ್‌ವೇಯಲ್ಲಿ ಲ್ಯಾಂಡಿಂಗ್ ಮಾಡುವಾಗ ಈ ಘಟನೆ ನಡೆದಿತ್ತು.
"ಅಕ್ಟೋಬರ್ 17 ರಂದು ದುಬೈನಿಂದ ದೆಹಲಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನ EK517 ಬರುವಾಗ ಹಕ್ಕಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹಾರಾಟದಲ್ಲಿ ಸ್ಪಲ್ಪ ವಿಳಂಬವಾಗಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿಕೆಯಲ್ಲಿ ತಿಳಿಸಿತ್ತು.