ವೈಭವದ ಜಂಬೂ ಸವಾರಿ, ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನ...: ಮೈಸೂರು ದಸರಾ 2026ಕ್ಕೆ ವರ್ಣರಂಜಿತ ತೆರೆ

ದಸರಾದ ಅಂತಿಮ ಕಾರ್ಯಕ್ರಮವಾದ ಪಂಜಿನ ಕವಾಯತು ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ನಡೆಯಿತು. ಇದನ್ನು ನೋಡಲು ಸಾವಿರಾರು ಜನ ನೆರೆದಿದ್ದರು.
Mysuru Dasara 2026 Ends with Jumbo Savari And Torchlight Parade At Bannimantap Ground
ವೈಭವದ ಜಂಬೂ ಸವಾರಿ
Updated on: 

ಮೈಸೂರು: 11 ದಿನಗಳ ಕಾಲ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಬುಧವಾರ ವೈಭವದ ಜಂಬೂ ಸವಾರಿ, ಪಂಜಿನ ಕವಾಯತು, ಡ್ರೋನ್ ಶೋ ಹಾಗೂ ಆಗಸದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ವರ್ಣರಂಜಿತ ತೆರೆ ಬಿದ್ದಿತು.

'ನಾಡ ಹಬ್ಬ'ವಾಗಿ ಆಚರಿಸಲ್ಪಡುವ ಈ ದಸರಾ ಅಥವಾ 'ಶರನ್ನವರಾತ್ರಿ' ಉತ್ಸವ ಈ ವರ್ಷ ಅತ್ಯಂತ ವೈಭವಯುತವಾಗಿ ನಡೆಯಿತು. ಇದು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವುದರ ಜೊತೆಗೆ, ರಾಜಮನೆತನದ ವೈಭವ ಮತ್ತು ಗತಕಾಲದ ವೈಭವವನ್ನು ನೆನಪಿಸುವಂತಿತ್ತು.

ಜಂಬೂ ಸವಾರಿಗೆ ಚಾಲನೆ

ಇಂದು ಸಂಜೆ 4:10ಕ್ಕೆ ಮೈಸೂರು ಅರಮನೆ ಅಂಗಳದಲ್ಲಿ ತಾಯಿ ಚಾಮುಂಡೇಶ್ವರಿ ವಿರಾಜಮಾನವಾಗಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜುಂಬೂಸವಾರಿಗೆ ಚಾಲನೆ ನೀಡಿದರು.

Mysuru Dasara 2026 Ends with Jumbo Savari And Torchlight Parade At Bannimantap Ground
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ: ತಾಯಿ ಚಾಮುಂಡೇಶ್ವರಿಗೆ CM ಡಿ.ಕೆ ಶಿವಕುಮಾರ್ ಪುಷ್ಪಾರ್ಚನೆ; Video

ಈ ವೇಳೆ ಸಚಿವ ಶಿವರಾಜ್ ತಂಗಡಗಿ, ಕೇರಳ ಸಿಎಂ ಸತೀಶನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನಾಡ ದೇವತೆ ಚಾಮುಂಡಿ ತಾಯಿ ವಿರಾಜಮಾನವಾಗಿರುವ 750 ಕೆಜಿಯ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿತು. ನಿಶಾನೆ, ಕುಮ್ಕಿ ಆನೆಗಳು ಪ್ರಶಾಂತನಿಗೆ ಸಾಥ್ ನೀಡಿದವು.

ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು

ದಸರಾದ ಅಂತಿಮ ಕಾರ್ಯಕ್ರಮವಾದ ಪಂಜಿನ ಕವಾಯತು ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ನಡೆಯಿತು. ಇದನ್ನು ನೋಡಲು ಸಾವಿರಾರು ಜನ ನೆರೆದಿದ್ದರು.

ಈ ಕಾರ್ಯಕ್ರಮದಲ್ಲಿ ಸಾಹಸಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ಪಂಜಿನ ಕವಾಯತಿನಲ್ಲಿ 60 ನಿಮಿಷಗಳ ಕಾಲ 9 ಪ್ರಮುಖ ರೋಚಕ ಪ್ರದರ್ಶನಗಳಿದ್ದವು. 650 ಖ್ಯಾತ ನೃತ್ಯ ಕಲಾವಿದರಿಂದ ಭಾರತದ ವಿವಿಧ ರಾಜ್ಯಗಳ ನೃತ್ಯ ವೈಭವ, ಮಿಲಿಟರಿ ಮೋಟಾರ್ ಸೈಕಲ್ ಶೋ ಹಾಗೂ ಮೂನ್ನೂರು ಸಿಬ್ಬಂದಿಗಳಿಂದ ಪಂಜಿನ ಕವಾಯತು ನಡೆಯಿತು. ಇದು ದಸರಾದ ಕೊನೆಯ ಪ್ರಮುಖ ಆಕರ್ಷಣೆ ಆಗಿದ್ದರಿಂದ ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಶುಭ 'ಮಕರ ಲಗ್ನ'ದಲ್ಲಿ ನಂದಿ ಧ್ವಜಕ್ಕೆ ಪೂಜೆ

ಮಧ್ಯಾಹ್ನ 1.36 ರಿಂದ 1.56 ರ ನಡುವೆ ಶುಭ 'ಮಕರ ಲಗ್ನ'ದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರು ಮತ್ತು ಇತರ ಗಣ್ಯರೊಂದಿಗೆ ಸೇರಿ, ಅಂಬಾ ವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ 'ನಂದಿ ಧ್ವಜ'ಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಜನರಿಗೆ ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com