

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ಏರೋಸ್ಪೇಸ್, ಔಷಧ, ಸಂಶೋಧನೆ ಮತ್ತು ನಾವೀನ್ಯತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪೋಲೆಂಡ್ ಜೊತೆ ವ್ಯಾಪಾರ ಹಾಗೂ ತಂತ್ರಜ್ಞಾನ ಸಂಬಂಧಗಳನ್ನು ಬಲಪಡಿಸಲು ಕರ್ನಾಟಕ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ತಿಳಿಸಿದ್ದಾರೆ. ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರು ಸುಮಾರು 100 ಉದ್ಯಮಿಗಳ ನಿಯೋಗದೊಂದಿಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರನ್ನು ಇಂದು ಬೆಂಗಳೂರಿನಲ್ಲಿ ಸ್ವಾಗತಿಸಿ ಆತಿಥ್ಯ ನೀಡಿದ ಬಳಿಕ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಈ ಭೇಟಿಯಿಂದ ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸಲು ಮತ್ತು ಪೋಲೆಂಡ್‌ನ ಕಂಪನಿಗಳೊಂದಿಗೆ ಸಹಕಾರವನ್ನು ವಿಸ್ತರಿಸಲು ಅವಕಾಶ ದೊರೆಯಲಿದೆ ಎಂದು ಹೇಳಿದರು.
ನಮ್ಮ ಯುವ ನಾಯಕರು ಹಾಗೂ ಹಿರಿಯ ಉದ್ಯಮಿಗಳು ಕರ್ನಾಟಕಕ್ಕೆ ಹೆಮ್ಮೆ ತಂದಿರುವುದು ನಾವು ಬಹಳ ಹೆಮ್ಮೆಪಡಬೇಕಾದ ಸಂಗತಿ. ಪೋಲೆಂಡ್ ಪ್ರಧಾನಿ ಎರಡನೇ ಬಾರಿಗೆ ಇಲ್ಲಿಗೆ ಬರುತ್ತಿದ್ದಾರೆ. ಅವರು ಅಲ್ಲಿನ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಒಬ್ಬರು. ಈಗ ಅವರು ಯುರೋಪಿಯನ್ ಒಕ್ಕೂಟದಲ್ಲಿದ್ದಾರೆ. ಉತ್ತಮ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ ಅವರು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ನಿನ್ನೆ ದೆಹಲಿಯಲ್ಲಿ ಉದ್ಯಮ ವಲಯದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಪೋಲೆಂಡ್‌ನ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾಗಿ ಹೇಳಿದರು.
ನಾವು ಅವರ ಉದ್ಯಮ ವಲಯದ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರಿಗೆ ಆಹ್ವಾನವನ್ನೂ ನೀಡಿದ್ದೇವೆ. ಅವರು ಇದರಿಂದ ಸಂತೋಷಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪೋಲೆಂಡ್‌ನ ಕಂಪನಿಗಳು ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ತೋರಿಸಿವೆ ಎಂದು ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆ ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದಂತಹ ಕಾರ್ಯಕ್ರಮಗಳ ಮೂಲಕ ಜಾಗತಿಕ ಪ್ರತಿನಿಧಿಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಡಿ ಕೆ ಶಿವಕುಮಾರ್ ಉಲ್ಲೇಖಿಸಿದರು. ಇಂತಹ ಕಾರ್ಯಕ್ರಮಗಳು ಹೂಡಿಕೆ ತಾಣವಾಗಿ ಕರ್ನಾಟಕದ ಮಹತ್ವ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತವೆ ಎಂದರು.
ವಿಶೇಷವಾಗಿ ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಮೀರಿ ಪಾಲುದಾರಿಕೆಯನ್ನು ವಿಸ್ತರಿಸಲು ರಾಜ್ಯ ಉತ್ಸುಕವಾಗಿದೆ ಎಂದು ತಿಳಿಸಿದರು.
ಔಷಧ ಕ್ಷೇತ್ರದಲ್ಲಿಯೂ ಅವರಿಗೆ ಅವಕಾಶಗಳನ್ನು ಪರಿಚಯಿಸಿದ್ದೇವೆ. ನಮ್ಮ ಭಾರತೀಯ ಕೈಗಾರಿಕಾ ಒಕ್ಕೂಟ (CII) ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಪೋಲೆಂಡ್ ಪ್ರಧಾನಿ ನಿಗದಿಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಖಂಡಿತವಾಗಿಯೂ ನಾವು ಸಹಕರಿಸುತ್ತೇವೆ. ಏರೋಸ್ಪೇಸ್ ಸೇರಿದಂತೆ ಅವರು ಬಯಸುವ ಯಾವುದೇ ಕ್ಷೇತ್ರದಲ್ಲೂ ನಾವು ಕೈಜೋಡಿಸುತ್ತೇವೆ ಎಂದರು.
ಬಾಹ್ಯಾಕಾಶ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆಯೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು. ಭಾರತ ಮತ್ತು ಪೋಲೆಂಡ್‌ನ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿರುವುದರಿಂದ ಸಂಶೋಧನೆ ಹಾಗೂ ನಾವೀನ್ಯತೆಯ ವಿನಿಮಯವನ್ನು ವಿಸ್ತರಿಸಲು ಅವಕಾಶಗಳಿವೆ ಎಂದು ಹೇಳಿದರು.
ಸಹಕಾರಕ್ಕೆ ಸಾಕಷ್ಟು ಅವಕಾಶಗಳಿವೆ. ನಾವು ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಅಥವಾ ಉದ್ಯಮವನ್ನಷ್ಟೇ ಗಮನಿಸುತ್ತಿಲ್ಲ. ಐಟಿ ಕ್ಷೇತ್ರ ಈಗಾಗಲೇ ಬೆಳೆದಿದೆ. ಈಗ ನಾವು ಎಐ ಕಡೆಗೆ ಗಮನ ಹರಿಸುತ್ತಿದ್ದೇವೆ. ವಿಶೇಷವಾಗಿ ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ಪ್ರಮುಖ ಕೇಂದ್ರವಾಗಿದೆ ಎಂಬುದನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದರು.
ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಭೇಟಿ ಭಾರತ ಮತ್ತು ಪೋಲೆಂಡ್ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿದೆ. ಶಿವಕುಮಾರ್ ಅವರೊಂದಿಗಿನ ಸಭೆಯಲ್ಲಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯ ಸಚಿವ ಸಂಪುಟದ ಇತರ ಸದಸ್ಯರು ಉಪಸ್ಥಿತರಿದ್ದರು.
ಭಾರತದೊಂದಿಗೆ, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ವ್ಯಾಪಾರ ಹಾಗೂ ಸಹಕಾರವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಪೋಲೆಂಡ್‌ನ ಹಣಕಾಸು ಮತ್ತು ಆರ್ಥಿಕ ಸಚಿವ ಆಂದ್ರೆಜ್ ಡೊಮಾನ್ಸ್ಕಿ ಮಾತನಾಡಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಪ್ರಧಾನಿ ಟಸ್ಕ್ ಅವರು ಹಲವು ಪ್ರಮುಖ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆ ಅತ್ಯಂತ ಉತ್ತಮವಾಗಿತ್ತು. ಉದ್ಯಮ ವಲಯದ ನಾಯಕರೊಂದಿಗೂ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.
ಭಾರತದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಕ್ಷೇತ್ರದೊಂದಿಗೆ ಮತ್ತಷ್ಟು ಮಾತುಕತೆ ನಡೆಸಲು ಪೋಲೆಂಡ್ ನಿಯೋಗವು ನವದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿತ್ತು. ಪೋಲೆಂಡ್‌ನ ಬಾಹ್ಯಾಕಾಶ ಮತ್ತು ಐಟಿ ಉದ್ಯಮಗಳ ಪ್ರತಿನಿಧಿಗಳೂ ಈ ನಿಯೋಗದಲ್ಲಿದ್ದು, ಸಹಕಾರ ವಿಸ್ತರಣೆಯ ಅವಕಾಶಗಳನ್ನು ಅನ್ವೇಷಿಸಲು ಆಗಮಿಸಿದ್ದರು.
ನಾವು ಪೋಲೆಂಡ್‌ನ ಬಾಹ್ಯಾಕಾಶ ಉದ್ಯಮದ ನಾಯಕರು ಮತ್ತು ಐಟಿ ವಲಯದ ಪ್ರಮುಖರೊಂದಿಗೆ ಇಲ್ಲಿಗೆ ಬಂದಿದ್ದೇವೆ. ಭಾರತೀಯ ಕಂಪನಿಗಳೊಂದಿಗೆ ಇನ್ನಷ್ಟು ಸಹಕಾರವನ್ನು ಬೆಳೆಸಲು ನಾವು ಬಯಸುತ್ತೇವೆ ಎಂದು ಡೊಮಾನ್ಸ್ಕಿ ತಿಳಿಸಿದರು.
ಪೋಲೆಂಡ್ ಯುರೋಪ್‌ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಉಭಯ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ದ್ವಿಪಕ್ಷೀಯ ವ್ಯಾಪಾರದಲ್ಲಿ ಗಣನೀಯ ವೃದ್ಧಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
2013ರಿಂದ 2025ರವರೆಗೆ ಭಾರತ ಮತ್ತು ಪೋಲೆಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರವು ಶೇ.192ರಷ್ಟು ಏರಿಕೆಯಾಗಿದ್ದು, 1.95 ಶತಕೋಟಿ ಅಮೆರಿಕನ್ ಡಾಲರ್‌ನಿಂದ 6.36 ಶತಕೋಟಿ ಡಾಲರ್‌ಗೆ ಹೆಚ್ಚಾಗಿದೆ. ವ್ಯಾಪಾರ ಸಮತೋಲನವು ಮುಖ್ಯವಾಗಿ ಭಾರತದ ಪರವಾಗಿದೆ.
ಪೋಲೆಂಡ್‌ಗೆ ಭಾರತದ ಪ್ರಮುಖ ರಫ್ತುಗಳಲ್ಲಿ ಜವಳಿ ಮತ್ತು ಉಡುಪುಗಳು, ರಾಸಾಯನಿಕಗಳು ಮತ್ತು ಔಷಧಗಳು, ಎಲೆಕ್ಟ್ರಾನಿಕ್ ಯಂತ್ರೋಪಕರಣಗಳು, ಎಂಜಿನಿಯರಿಂಗ್ ಉತ್ಪನ್ನಗಳು, ವಾಹನಗಳು, ರಬ್ಬರ್ ಮತ್ತು ಖನಿಜ ಇಂಧನಗಳು ಸೇರಿವೆ.
ಪೋಲೆಂಡ್‌ನಿಂದ ಭಾರತಕ್ಕೆ ಆಮದಾಗುವ ಪ್ರಮುಖ ವಸ್ತುಗಳಲ್ಲಿ ಯಂತ್ರೋಪಕರಣಗಳು ಮತ್ತು ಯಾಂತ್ರಿಕ ಉಪಕರಣಗಳು, ವಿದ್ಯುತ್ ಉಪಕರಣಗಳು, ಖನಿಜ ಇಂಧನಗಳು, ಅಮೂಲ್ಯ ಲೋಹಗಳು ಮತ್ತು ರತ್ನಗಳು, ನಿಖರ ಹಾಗೂ ವೈದ್ಯಕೀಯ ಉಪಕರಣಗಳು ಮತ್ತು ವಿಮಾನ ಹಾಗೂ ಬಾಹ್ಯಾಕಾಶ ಸಂಬಂಧಿತ ಉತ್ಪನ್ನಗಳು ಸೇರಿವೆ.