

ಬೆಂಗಳೂರು : ಸಿದ್ದರಾಮಯ್ಯನವರು ಅಷ್ಟೊಂದು ವೀಕ್ ಮನುಷ್ಯ ಅಲ್ಲ. ಕುಮಾರಸ್ವಾಮಿಯವರಿಗೆ ಇರುವುದಕ್ಕಿಂತ ಜಾಸ್ತಿ ಧೈರ್ಯ ಅವರಿಗೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡುವೆ ಎಂದರು.
ಸ್ಟಿಂಗ್ ಕಾರ್ಯಾಚರಣೆಯಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಕೆಲವರು ಮಾಡಿರುವ ಹೀನ ಕೃತ್ಯ ಇದು ಎಂದು ಹೇಳಿದ್ದೇನೆ. ಅದನ್ನು ರಾಜಕೀಯವಾಗಿ ಎದುರಿಸುತ್ತೇವೆ ಎಂದರು.
ನಮ್ಮ ಪಕ್ಷದವರೇ ಅಂತ ಯಾರ ಮೇಲಾದರೂ ಪುರಾವೆ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ. ಪುರಾವೆ ಇಲ್ಲದೇ ಅಪಾದನೆ ಮಾಡಿದರೆ ಆಗುವುದಿಲ್ಲ. ವಿಡಿಯೊದಲ್ಲಿ ಯಾರಿದ್ದಾರೆ, ಅವರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಲು ಸಿಐಡಿ, ಸಿಬಿಐ ಎಲ್ಲಾ ಇದೆ ಎಂದು ಹೇಳಿದರು.
ಇನ್ನೂ ವಿಧಾನ ಪರಿಷತ್ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣಾ ನೀತಿ ಸಂಹಿತೆ ಮುಕ್ತಾಯದ ಬಳಿಕವೇ ನಿಗಮ ಮಂಡಳಿ ನೂತನ ಅಧ್ಯಕ್ಷರ ನೇಮಕಾತಿ ಪಟ್ಟಿ ಪ್ರಕಟವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಚುನಾವಣೆ ಬಳಿಕ ಯಾವುದೇ ಕ್ಷಣದಲ್ಲಿಯಾದರೂ ನಿಗಮ ಮಂಡಳಿ ನೇಮಕ ಪಟ್ಟಿ ಪ್ರಕಟವಾಗಬಹುದು. ಮೊದಲಿಗೆ ನಿರ್ದೇಶಕರು, ಸದಸ್ಯರ ನೇಮಕವಾಗುತ್ತದೆ. ಮುಂದಿನ ದಿನಗಳಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡುವುದು ಎಂದು ಗೊತ್ತಾಗಲಿದೆ ಎಂದರು.
ಪಕ್ಷದ ವರಿಷ್ಟರು ನಿಗಮ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ವೇಳೆಗೆ ಪಟ್ಟಿ ಬಿಡುಗಡೆ ಆಗಬೇಕಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ವಿಳಂಬವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿ ಪ್ರಕಟವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.