ನಮ್ಮ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆಯಿಂದ ಅಡ್ಡಿ; ನಮ್ಮ ಖಾಸಗಿ ಆಸ್ತಿ ಅಂಬಾರಿ ಭದ್ರತೆಗೂ ಧಕ್ಕೆ: ರಾಜಮಾತೆ ಪ್ರಮೋದಾದೇವಿ ಅಸಮಾಧಾನ!

ಇದೇ ವೇಳೆ ಪೊಲೀಸ್ ಇಲಾಖೆ ವಿರುದ್ಧವೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ, ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದ ಕೊರತೆ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.
Pramoda deviwadiyar
ಪ್ರಮೋದಾ ದೇವಿ ಒಡೆಯರ್online desk
Updated on: 

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಆಯೋಜನೆ ಸಂಬಂಧ ಹಲವು ನಕಾರಾತ್ಮಕ ಸುದ್ದಿಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದ್ದವು. ಈಗ ಈ ವಿಷಯವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯ ಮೌನ ಮುರಿದಿದ್ದಾರೆ.

ತೀವ್ರ ಅಸಮಾಧಾನ ಹೊರಹಾಕಿರುವ ಪ್ರಮೋದದೇವಿ ಒಡೆಯರ್, ಈ ಬಗ್ಗೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ದಸರಾ ಆಯೋಜನೆಯಲ್ಲಿ ಲೋಪಗಳಾಗಿರುವುದನ್ನು ಖಂಡಿಸಿರುವ ರಾಜಮಾತೆ ಪ್ರಮೋದಾದೇವಿ, ವಿವಿಧ ಇಲಾಖೆಗಳ ಅಧಿಕಾರಿಗಳ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪೊಲೀಸ್ ಇಲಾಖೆ ವಿರುದ್ಧವೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ, ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದ ಕೊರತೆ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಜಟ್ಟಿ ಕಾಳಗ ನಿಂತಿದ್ದು ಇದೇ ಮೊದಲೇನಲ್ಲ!

ವಜ್ರಮುಷ್ಠಿ ಕಾಳಗದ ವೇಳೆಯಲ್ಲೂ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ, ಈ ಬಾರಿ ಜಟ್ಟಿ ಕಾಳಗ ನಿಲ್ಲಲು ಪೊಲೀಸ್ ಇಲಾಖೆ ಮತ್ತು ಜಟ್ಟಿ ಸಮುದಾಯದ ನಡುವಿನ ಸಮನ್ವಯ ಕೊರತೆಯೇ ಕಾರಣ ಎಂದು ಹೇಳಿದ್ದಾರೆ.

1970, 1980, 2020ರಲ್ಲಿಯೂ ಜಟ್ಟಿ ಕಾಳಗ ನಿಂತಿತ್ತು. ದಸರಾ ಆಚರಣೆಯ ಭಾಗವಾಗಿ ವಜ್ರಮುಷ್ಠಿ ಕಾಳಗ ನಡೆಸುತ್ತಿಲ್ಲ, ವಜ್ರಮುಷ್ಠಿ ಕಾಳಗಕ್ಕೆ ಧಾರ್ಮಿಕ ಮಹತ್ವ ಇಲ್ಲ ಎಂದು ರಾಜಮಾತೆ ಸ್ಪಷ್ಟನೆ ನೀಡಿದ್ದಾರೆ. ವಿಜಯಯಾತ್ರೆಯು ನಿಗದಿತ ಮುಹೂರ್ತದಂತೆ ನಡೆದಿದೆ. ಸಮನ್ವಯ ಕೊರತೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.

ಅಂಬಾರಿಯು ನಮ್ಮ ಖಾಸಗಿ ಆಸ್ತಿ ಹೊರತು ಸರ್ಕಾರದ್ದಲ್ಲ

ಇದೇ ವೇಳೇ ಚಿನ್ನದ ಅಂಬಾರಿ ವಿಷಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿಕಾರಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್, ಪೊಲೀಸ್ ಆಯುಕ್ತರು ನೀಡಿದ ಭರವಸೆ ಮೇರೆಗೆ ಅಂಬಾರಿ ನೀಡಲಾಗಿತ್ತು. ಆಯುಕ್ತರು ನೀಡಿದ್ದ ಭರವಸೆ ಉಳಿಸಿಕೊಂಡಿಲ್ಲ, ಅಂಬಾರಿ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿದ್ದರು. ಅಂಬಾರಿ ನಮ್ಮ ಖಾಸಗಿ ಆಸ್ತಿಯೇ ಹೊರತು ಸರ್ಕಾರದ ಆಸ್ತಿ ಅಲ್ಲ, ಅಂಬಾರಿ ಬಳಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿದ್ದರು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿ ಬಳಿ ಇದ್ದರು, ಅಂಬಾರಿ ಭದ್ರತೆಗೆ ಧಕ್ಕೆ ಉಂಟು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Pramoda deviwadiyar
ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ; ದೇವರನ್ನು ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಪ್ರಮೋದಾದೇವಿ ಒಡೆಯರ್

ಸರ್ಕಾರಿ ದಸರಾಗೆ ಯಾವುದೇ ಮಹತ್ವ ಇಲ್ಲ

ಪೊಲೀಸ್ ಇಲಾಖೆ ವಿರುದ್ಧವೂ ಅಸಮಾಧಾನ ಹೊರಹಾಕಿರುವ ರಾಜಮಾತೆ ಪ್ರಮೋದಾದೇವಿ, ನಮ್ಮ ಅತಿಥಿಗಳಿಗಾಗಿ ಇರಿಸಿದ್ದ ಖಾಸಗಿ ಸ್ಥಳ ಅತಿಕ್ರಮಣ ಮಾಡಿಕೊಂಡಿದ್ದರು. ಅನಧಿಕೃತ ತಡೆ ಹಾಕಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಮಾಡಿದರು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿರುದ್ಧ ನೇರ ಆರೋಪ ಮಾಡಿದ ರಾಜಮಾತೆ, ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಸರ್ಕಾರಿ ದಸರಾಗೆ ಯಾವುದೇ ಮಹತ್ವ ಇಲ್ಲ, ನವರಾತ್ರಿ ಆಚರಣೆಯಲ್ಲಿ ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಉಚ್ಚ ನ್ಯಾಯಾಲಯ ಸಂಪರ್ಕಿಸಲು ನಾವು ಸ್ವತಂತ್ರರು ನಮ್ಮ ಆಚರಣೆಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಅಡ್ಡಿ ಆಗ್ತಿದೆ. ಈ ಕುರಿತು ಉಚ್ಚ ನ್ಯಾಯಾಲಯ ಸಂಪರ್ಕಿಸಲು ನಾವು ಸ್ವತಂತ್ರರು, ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಆದರೆ, ನಾವು ಪ್ರತಿ ವರ್ಷ ಅಂತಹ ಕ್ರಮಕೈಗೊಳ್ಳದೆ ದೂರ ಉಳಿದಿದ್ದೇವೆ. ಮೊದಲ ದಿನದಿಂದ ಏಳು ದಿನದವರೆಗೆ ಸರ್ಕಾರಿ ಕಾರ್ಯಕ್ರಮ ನಡೆಯಬಹುದು. ಆಯುಧಪೂಜೆ, ವಿಜಯದಶಮಿಗೆ ನಮಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಆದೇಶ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಎಚ್ಚರಿಸಿದ್ದಾರೆ.

ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯ ನನ್ನಿಂದ ಮುಚ್ಚಿಡಲಾಗಿತ್ತು- ಪ್ರಮೋದಾದೇವಿ ಒಡೆಯರ್ ಬೇಸರ

ಅಂಬಾರಿ ಹೊರುವ ಆನೆ ವಿಷಯ ನಿರ್ಣಯದ ಬಗ್ಗೆಯೂ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಬಾರಿ ಹೊರುವ ಆನೆ ವಿಷಯ ಮುಚ್ಚಿಡಲಾಗಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 45 ವರ್ಷದಲ್ಲಿ ಮೊದಲ ಬಾರಿಗೆ ಗೌಪ್ಯತೆ ತೋರಲಾಗಿದೆ. ಕೊನೆಯ ಕ್ಷಣದವರೆಗೂ ಯಾವುದೇ ಮಾಹಿತಿ ನೀಡಲಿಲ್ಲ, ಕಾರ್ಯಕ್ರಮಕ್ಕೆ 5 ದಿನ ಬಾಕಿ ಇರುವಾಗ ತಿಳಿಸಿದರು. ಯಾವ ಆನೆಗೆ ಅಂಬಾರಿ ಹೊರೆಸ್ತೀರಿ ಅಂತ ನಾನೇ ಕೇಳಬೇಕಾಯಿತು. ಖುದ್ದು ಡಿಸಿಎಫ್‌ಗೆ ಕೇಳಬೇಕಾದ ಸ್ಥಿತಿ ನಿರ್ಮಿಸಿದ್ದು ಅಸಮಾಧಾನ ತಂದಿದೆ. ಪ್ರತಿ ವರ್ಷವೂ ನಾನು ಸಹಕಾರ ಕೊಡುತ್ತಿದ್ದೇನೆ. ನಮ್ಮ ಸಹಕಾರವನ್ನೇ ಕೇವಲ ಸಾಮಾನ್ಯ ಸಂಗತಿ ಅಂತ ಪರಿಗಣಿಸಿ ನಿರ್ಲಕ್ಷ್ಯ ತೋರಲಾಗ್ತಿದೆ. ಇದು ನನಗೆ ತೀವ್ರ ನಿರಾಸೆ ಉಂಟು ಮಾಡಿದೆ. ಮುಂದೆ ಸರ್ಕಾರ ನನ್ನ ಸಲಹೆಗಳನ್ನು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com