

ಮೈಸೂರು: ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಾಗಲ್ಲ. ಹಾಗಾಗಿ ಆತಂಕ ಬೇಡ. ನಾನು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇನೆಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ, ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಜ್ಯೋತಿಷ್ಯವನ್ನಲ್ಲ, ದೇವರನ್ನು ನಂಬುತ್ತೇವೆ. ದೇವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಹೇಳಿದ್ದಾರೆ. ಇದೇ ವೇಳೆ ಈ ಘಟನೆಗೆ ಅನಗತ್ಯ ಅರ್ಥಗಳನ್ನು ಕಲ್ಪಿಸಬೇಡಿ ಎಂದೂ ಮನವಿ ಮಾಡಿದ್ದಾರೆ.
ಅಲ್ಲದೆ, ಜಟ್ಟಿ ಕಾಳಗ ರದ್ದಾಗಿರುವ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡುವುದಾಗಿ ತಿಳಿಸಿದ್ದಾರೆ.
ನಮ್ಮ ಮನೆಯ ವಿಧಿವಿಧಾನಗಳು ನಿಗದಿತ ಮುಹೂರ್ತದಲ್ಲೇ ನಡೆಯಬೇಕು. ಮುಹೂರ್ತ ಮೀರಿದ ಬಳಿಕ ಯಾವುದೇ ಕಾರ್ಯವನ್ನು ಮಾಡುವುದಿಲ್ಲ. ಹೀಗಾಗಿಯೇ ಜಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆ. ಈ ವಿಚಾರದಲ್ಲಿ ನಾನು ಯಾವುದೇ ಜ್ಯೋತಿಷಿಗಳ ಸಲಹೆ ಪಡೆದಿಲ್ಲ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿದ್ದೇನೆ. ಹೀಗಾಗಿ, ನನಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ದಸರಾ ಅಂಬಾರಿ ಹೊತ್ತ ಆನೆ ಪ್ರಶಾಂತ್ ಬಗ್ಗೆಯೂ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಈ ಬಾರಿ ಆನೆಯ ಬಗ್ಗೆ ತಮಗೆ ಹೆಚ್ಚಿನ ಆತಂಕವಿತ್ತು ಎಂದು ಹೇಳಿದರು.
ಪ್ರಶಾಂತ್ ಯಾವ ರೀತಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೆ, ಹೇಗೆ ನಡೆಯುತ್ತಾನೆ ಎಂಬ ಬಗ್ಗೆ ನನಗೆ ಆತಂಕವಿತ್ತು. ಹಿಂದೆಂದೂ ಈ ರೀತಿಯ ಆತಂಕ ನನಗಾಗಿರಲಿಲ್ಲ. ಆದರೆ, ಈ ಬಾರಿ ನನ್ನ ಎಲ್ಲ ಆತಂಕಗಳನ್ನು ಮೀರಿ ಪ್ರಶಾಂತ್ ಉತ್ತಮವಾಗಿ ಅಂಬಾರಿ ಹೊತ್ತಿದ್ದಾನೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂಬ ಭಾವನೆ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.