ಬೆಂಗಳೂರು ಅಭಿವೃದ್ಧಿಗೆ 10 ವರ್ಷಗಳ ಮೆಗಾ ಪ್ಲ್ಯಾನ್‌; ₹1 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಘೋಷಣೆ..!

ಯಾವುದೇ ತಾರತಮ್ಯವಿಲ್ಲದೆ ಶಾಸಕರಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ನಗರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಅಗತ್ಯ ಪ್ರಮಾಣದ ಅನುದಾನ ಒದಗಿಸಲಾಗಿದೆ.
Chief Minister DK Shivakumar chairs a meeting with city MLAs and MLCs on Tuesday
ಶಾಸಕರೊಂದಿಗೆ ಸಭೆ ನಡೆಸುತ್ತಿರುವ ಡಿಕೆ. ಶಿವಕುಮಾರ್.
Updated on: 

ಬೆಂಗಳೂರು: 2037ರಲ್ಲಿ ಬೆಂಗಳೂರು ನಗರ 500 ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಇದರ ನೆನಪಿಗಾಗಿ ಐಟಿ ಹಬ್‌ನ ಚಿತ್ರಣವನ್ನೇ ಬದಲಾಯಿಸಲು ರಾಜ್ಯ ಸರ್ಕಾರ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಬೆಂಗಳೂರಿನ ಸಂಚಾರ ದಟ್ಟಣೆ, ಕುಡಿಯುವ ನೀರು ಮತ್ತು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 1 ಲಕ್ಷ ಕೋಟಿ ರೂ. ವೆಚ್ಚದ 10 ವರ್ಷಗಳ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಪ್ರಕಟಿಸಿದ್ದಾರೆ.

ಮಂಗಳವಾರ ನಗರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ತಾರತಮ್ಯವಿಲ್ಲದೆ ಶಾಸಕರಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ನಗರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಅಗತ್ಯ ಪ್ರಮಾಣದ ಅನುದಾನ ಒದಗಿಸಲಾಗಿದೆ. ತಮ್ಮ ಕ್ಷೇತ್ರಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಪ್ರಸ್ತಾವನೆಗಳನ್ನು ಶಾಸಕರು ಸಲ್ಲಿಸಿದರೆ, ಅನುದಾನ ಬಿಡುಗಡೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. 2037ರಲ್ಲಿ ಬೆಂಗಳೂರು ನಗರ 500 ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಸುಮಾರು ರೂ.1 ಲಕ್ಷ ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ.

2027ರ ವೇಳೆಗೆ ಪ್ರಸ್ತುತ 96 ಕಿ.ಮೀ. ಇರುವ ಮೆಟ್ರೊ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಬೆಂಗಳೂರಿನ ಮೂಲಸೌಕರ್ಯವನ್ನು ಉನ್ನತೀಕರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹಲವು ಪ್ರಮುಖ ರಸ್ತೆ ಯೋಜನೆಗಳ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಇದರಲ್ಲಿ 40 ಕಿ.ಮೀ. ಉದ್ದದ ಎರಡು ಪಥಗಳ ಸುರಂಗ ಮಾರ್ಗ, 120 ಕಿ.ಮೀ. ಉದ್ದದ ಎತ್ತರಿಸಿದ ರಸ್ತೆ ಕಾರಿಡಾರ್ ಹಾಗೂ 1,500 ಕಿ.ಮೀ. ಉದ್ದದ ಪ್ರಮುಖ ಮತ್ತು ಉಪಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳು ಸೇರಿವೆ.

Chief Minister DK Shivakumar chairs a meeting with city MLAs and MLCs on Tuesday
ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಹೆಬ್ಬಾಳದಲ್ಲಿ 2 ಕಿ.ಮೀ. ಉದ್ದದ ಕಿರು ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಿದೆ. 16.5 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ಗೆ ರೂ.17,780 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರ ರೂ.7,000 ಕೋಟಿ ಹೂಡಿಕೆ ಮಾಡಲಿದೆ. 21 ಕಿ.ಮೀ. ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್‌ಗೆ ಎರಡು ಪ್ರವೇಶ ಬಿಂದುಗಳಿರಲಿವೆ.

ರಾಷ್ಟ್ರೀಯ ಹೆದ್ದಾರಿ ಮಾನದಂಡಗಳ ಪ್ರಕಾರ 120 ಕಿ.ಮೀ. ಉದ್ದದ ಎತ್ತರಿಸಿದ ರಸ್ತೆ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂದಾಜು ರೂ.23,165 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, 10 ಕಿ.ಮೀ.ಗಿಂತ ಕಡಿಮೆ ಉದ್ದದ ಕಾರಿಡಾರ್‌ಗಳಲ್ಲಿ ಟೋಲ್ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದರು.

ನಗರದಲ್ಲಿ ಸುಮಾರು 500 ಕಿ.ಮೀ. ಉದ್ದದ ಹೊಸ ರಸ್ತೆ ಸಂಪರ್ಕಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜಕಾಲುವೆಗಳ ಪಕ್ಕದಲ್ಲಿ 300 ಕಿ.ಮೀ. ಉದ್ದದ ಬಫರ್ ರಸ್ತೆಗಳು ಹಾಗೂ 68 ಕಿ.ಮೀ. ಉದ್ದದ ವಾಣಿಜ್ಯ ಕಾರಿಡಾರ್ ಅಭಿವೃದ್ಧಿ ಇದರಲ್ಲಿ ಸೇರಿವೆ. 17 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯನ್ನು ಮರುಅಭಿವೃದ್ಧಿಪಡಿಸಲಾಗುವುದು.

ನಗರದ ಹೊರವಲಯದಲ್ಲಿ 18 ಕಿ.ಮೀ. ಉದ್ದದ ರಸ್ತೆಗಳಿಗೆ ಶೀಘ್ರದಲ್ಲೇ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಹೊರ ವರ್ತುಲ ರಸ್ತೆಯ ವ್ಯಾಪ್ತಿಯಲ್ಲಿ 37 ಕಿ.ಮೀ. ಉದ್ದದ ದ್ವಿ-ಮಹಡಿ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ 11 ಕಿ.ಮೀ. ಉದ್ದದ ರಸ್ತೆಗೆ ಮಾತ್ರ ಅನುಮೋದನೆ ನೀಡಿದೆ ಎಂದು ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಹೊರಗಿರುವ 65 ಗ್ರಾಮ ಪಂಚಾಯಿತಿಗಳು ಈಗಾಗಲೇ ನಗರೀಕರಣಗೊಂಡಿವೆ. ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಅವುಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಯೋಜಿಸಿದೆ.

ಈ ಪ್ರದೇಶಗಳಿಗೆ ಹಂತ ಹಂತವಾಗಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತ್ಯಾಜ್ಯ ನಿರ್ವಹಣೆ

  • ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಕಸ ಸಂಗ್ರಹಣೆಯ ಗುತ್ತಿಗೆ ವ್ಯವಸ್ಥೆಯನ್ನು ಸರ್ಕಾರ ಪುನರ್‌ರಚಿಸಿದೆ.

  • ನಗರದ 27 ವಲಯಗಳಲ್ಲಿ ಒಟ್ಟು 33 ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದೆ. ಇವುಗಳ ಪೈಕಿ 21 ಪ್ಯಾಕೇಜ್‌ಗಳಿಗೆ ಟೆಂಡರ್ ತೆರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆದೇಶಗಳನ್ನು ನೀಡಲಾಗುವುದು.

  • ಹೊಸ ಗುತ್ತಿಗೆ ವ್ಯವಸ್ಥೆಯಡಿ ದಿನಕ್ಕೆ 9,000 ಟನ್‌ಗಳವರೆಗೆ ತ್ಯಾಜ್ಯ ಸಂಗ್ರಹಿಸಲು ಅವಕಾಶವಿರಲಿದೆ. ಕಸ ಸಂಗ್ರಹಿಸುವ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com