ನಂದಿನಿ ಹಾಲಿನ ಬೆಲೆ ಲೀಟರ್‌ಗೆ ₹8 ಏರಿಕೆ: ಕಾಫಿ, ಟೀ, ತಿಂಡಿ ದರ ಕೂಡ ಶೀಘ್ರ ಹೆಚ್ಚಳ, ಹೊಟೆಲ್ ಮಾಲೀಕರ ಸಂಘ ಹೇಳಿದ್ದೇನು!

ನವೆಂಬರ್ 1ರಿಂದ ಜಾರಿಗೆ ಬರಲಿರುವ ಹಾಲಿನ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು ತಮ್ಮ ಮೆನು ದರಗಳನ್ನು ಪರಿಷ್ಕರಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಹೇಳಿದೆ.
Bengaluru hotels association warns of higher coffee, tea and food prices
ಹಾಲಿನ ದರ ಏರಿಕೆ ಮತ್ತು ಹೊಟೆಲ್ ಮಾಲೀಕರ ಸಂಘದ ಎಚ್ಚರಿಕೆ
Updated on: 

ಬೆಂಗಳೂರು: ನಂದಿನಿ ಹಾಲಿನ ಬೆಲೆ ಲೀಟರ್‌ಗೆ ₹8 ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ-ತಿನಿಸು ಹಾಗೂ ಊಟದ ದರ ಏರಿಕೆಯಾಗುವ ಸಾಧ್ಯತೆ ಇದೆ.

ಹಾಲಿನ ದರ ಏರಿಕೆಯಿಂದ ಹೋಟೆಲ್‌ಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಲಿದ್ದು, ಹೆಚ್ಚುವರಿ ವೆಚ್ಚವನ್ನು ಭರಿಸುವುದು ಕಷ್ಟವಾಗಲಿದೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಸರ್ಕಾರಕ್ಕೆ ಎಚ್ಚರಿಸಿದೆ. ಅಕ್ಟೋಬರ್ 29ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಸಂಘ ಈ ವಿಷಯ ತಿಳಿಸಿದೆ.

ನವೆಂಬರ್ 1ರಿಂದ ಜಾರಿಗೆ ಬರಲಿರುವ ಹಾಲಿನ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು ತಮ್ಮ ಮೆನು ದರಗಳನ್ನು ಪರಿಷ್ಕರಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಹೇಳಿದೆ.

“ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹2ರಿಂದ ₹3ರಷ್ಟು ಮಾತ್ರ ಹೆಚ್ಚಿಸಿದ್ದರೆ ಹೋಟೆಲ್‌ಗಳಲ್ಲಿ ಕಾಫಿ, ಟೀ ಅಥವಾ ತಿಂಡಿಗಳ ಬೆಲೆ ಏರಿಸುವ ಅಗತ್ಯವಿರಲಿಲ್ಲ. ಆದರೆ, ಈಗ ಮಾಡಿರುವ ಭಾರಿ ಬೆಲೆ ಏರಿಕೆಯಿಂದ ಹಾಲು ಬಳಸಿ ತಯಾರಿಸುವ ಆಹಾರ ಮತ್ತು ಪಾನೀಯಗಳ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ” ಎಂದು ಸಂಘ ತಿಳಿಸಿದೆ.

Bengaluru hotels association warns of higher coffee, tea and food prices
ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಸಾರಿಗೆ ಸಚಿವ!

ಸಾಮಾನ್ಯ ಜನರಿಗೂ ಬೆಲೆ ಏರಿಕೆ ಬಿಸಿ

ಹಾಲಿನ ಬೆಲೆ ಹೆಚ್ಚಳವು ಹೋಟೆಲ್ ಉದ್ಯಮದ ಮೇಲೆ ಮಾತ್ರವಲ್ಲದೆ, ಹಾಲನ್ನು ಪೌಷ್ಟಿಕ ಆಹಾರವಾಗಿ ಅವಲಂಬಿಸಿರುವ ಸಾಮಾನ್ಯ ಜನರು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳ ಮೇಲೂ ಪರಿಣಾಮ ಬೀರಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಬೆಲೆ ಏರಿಕೆಯನ್ನು ಮಿತಿಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ. ಹೈನುಗಾರಿಕೆ ಕ್ಷೇತ್ರದಲ್ಲಿನ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಬೇಕು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ರೈತರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದೆ.

ಅಕ್ಕಿ ಬೆಲೆಯೂ ಏರಿಕೆ: ಹೋಟೆಲ್‌ಗಳಿಗೆ ಮತ್ತಷ್ಟು ಹೊರೆ

ಈ ನಡುವೆ ಈಗಾಗಲೇ ಅಕ್ಕಿಯ ಬೆಲೆ ಹೆಚ್ಚಳದಿಂದ ಹೋಟೆಲ್ ಉದ್ಯಮ ಆರ್ಥಿಕ ಒತ್ತಡ ಎದುರಿಸುತ್ತಿದೆ. ಇದರ ನಡುವೆ ಹಾಲಿನ ಬೆಲೆಯೂ ಏರಿಕೆಯಾಗಿರುವುದರಿಂದ ಕಾಫಿ, ಟೀ, ತಿಂಡಿ ಮತ್ತು ಊಟದ ದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಸಂಘ ಹೇಳಿದೆ.

ನವೆಂಬರ್ 1ರಿಂದ ನಂದಿನಿ ಹಾಲು ಹೊಸ ದರದಲ್ಲಿ ಲಭ್ಯ

ಅಕ್ಟೋಬರ್ 29ರಂದು ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಪರಿಷ್ಕೃತ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.

ಬೆಲೆ ಏರಿಕೆಯಲ್ಲಿ ಪ್ರತಿ ಲೀಟರ್‌ಗೆ ₹7 ರೈತರಿಗೆ ಲಭಿಸಲಿದ್ದು, ಉಳಿದ ₹1 ಅನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ. ನಂದಿನಿಯ ನೀಲಿ ಪ್ಯಾಕೆಟ್‌ನಲ್ಲಿ ಮಾರಾಟವಾಗುವ ಸಾಮಾನ್ಯ ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ₹46ರಿಂದ ₹54ಕ್ಕೆ ಏರಿಕೆಯಾಗಲಿದೆ.

ಹಾಲಿನ ಹೊಸ ದರ ಜಾರಿಗೆ ಬಂದ ಬಳಿಕ ಹೋಟೆಲ್‌ಗಳು ಯಾವ ಪ್ರಮಾಣದಲ್ಲಿ ಬೆಲೆ ಪರಿಷ್ಕರಣೆ ಮಾಡಲಿವೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ಬೆಂಗಳೂರು ಹೋಟೆಲ್‌ಗಳ ಸಂಘವು ಕಾಫಿ, ಟೀ ಸೇರಿದಂತೆ ಹಾಲು ಬಳಸಿ ತಯಾರಿಸುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X