

ಮೈಸೂರು: ದಸರಾ ಸಂದರ್ಭದಲ್ಲಿ ಎಷ್ಟೇ ಅನ್ಯಾಯ ಆಗುತ್ತಿದ್ದರೂ ಮೌನ ತಾಳಿದ್ದೆ. ಏನನ್ನೂ ಮಾತನಾಡಿರಲಿಲ್ಲ, ಮುಂದೆಯೂ ಸಹಿಸುವುದಿಲ್ಲ. ಮೈಸೂರು ರಾಜಮನೆತನ ಗೌರವ ಸ್ಥಾನದಲ್ಲಿ ಇರುವಂಥದ್ದು. ಆ ಬಗ್ಗೆ ಮಾತನಾಡುವಾಗ, ರೀತಿ,ನೀತಿ ಮೀರಬಾರದು ಎಂದು ಶಾಸಕ ತನ್ವೀರ್ ಸೇಠ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಅಂಬಾರಿ ರಾಜ್ಯ ಸರ್ಕಾರದ ಅಧೀನದಲ್ಲಿದ್ದರೂ, ಅದರ ಜೋಡಣೆಗೆ ಬೇಕಾದ ಹಗ್ಗ ರಾಜಮನೆತನದ ಬಳಿ ಇರುವುದು ಸಂಬಂಧಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಜಿಲ್ಲಾಡಳಿತ, ರಾಜಮನೆತನ ಮತ್ತು ಸಂಬಂಧ ಪಟ್ಟ ಇಲಾಖೆಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ನಡೆಸುವಂತೆ ಆಗ್ರಹಿಸಿದ ಅವರು, ಅಂಬಾರಿ ಸರ್ಕಾರದ ಬಳಿಯಿದ್ದರೂ ಅದರ ಜೋಡಣೆಗೆ ಬೇಕಾಗ ಹಗ್ಗ ರಾಜಮನೆತನದ ಬಳಿ ಇರುವುದು ಸಂಬಂಧಗಳ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ ಎಂದರು.
ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದ್ದು, ಆ ಗೌರವವನ್ನು ಕಾಪಾಡಿಕೊಳ್ಳಬೇಕು, ಅಂಬಾರಿ ನಮ್ಮದು ಎಂಬ ರಾಜಮನೆತನದ ಹೇಳಿಕೆ, ಅರಮನೆ ,ಸರ್ಕಾರದ ಆಸ್ತಿ ಎಂಬ ಚರ್ಚೆಗಳ ಬಗ್ಗೆ ಸ್ಪಷ್ಟತೆಗಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದೇನೆ. ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಳ್ಳಲು ಎಲ್ಲ ಸಂದರ್ಭದಲ್ಲೂ ಅವಕಾಶಗಳಿವೆ. ಇದು ನಾಲ್ಕು ಜನರ ಹಬ್ಬವಲ್ಲ, ನಾಡಹಬ್ಬ. ರಾಜ್ಯದ ಎಲ್ಲರಿಗೂ ಸೇರಿದ್ದಾಗಿದೆ. ಯಾರು ಯಾರ ಮೇಲೂ ದೂರುತ್ತಾ ಕೂರುವುದು ಬೇಡ. ಲೋಪಗಳಾಗಿದ್ದಲ್ಲಿ ಮುಂದೆ ಸರಿಪಡಿಸಿಕೊಂಡು ಹೋಗಬೇಕು ಎಂದರು.
ಆಗಿರುವುದರಲ್ಲಿ ಎಲ್ಲವೂ ಸರಿ ಎಂದು ನಾನು ಒಪ್ಪಲ್ಲ. ಎಲ್ಲವೂ ಸರಿ ಇಲ್ಲವೆಂದು ಹೇಳುವ ಮೂರ್ಖತನವೂ ನನ್ನಲ್ಲಿಲ್ಲ. ಎಲ್ಲವನ್ನೂ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಅರಮನೆ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಹೆಚ್ಚಿನ ಚರ್ಚೆಗೆ ನಾನು ಸಮರ್ಥನಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.