ಹಾಸನಾಂಬೆ ದರ್ಶನ ಪಡೆದ ಚಿನ್ನ ಕಳ್ಳ ಸಾಗಣೆ ಆರೋಪಿ ರನ್ಯಾ ರಾವ್! ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ

ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಅಧಿಕೃತ ಶಿಷ್ಟಾಚಾರದ ಸೌಲಭ್ಯ ಬಳಸಿಕೊಂಡು ದೇವಾಲಯಕ್ಕೆ ಆಗಮಿಸಿದ್ದು, ದೇವಿಯ ದರ್ಶನ ಮಾಡಿದ್ದಾರೆ. ಆರೋಪಿಗೆ ಪ್ರೊಟೋಕಾಲ್ ದರ್ಶನ ಕೊಟ್ಟಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
 Ranya Rao
ರನ್ಯಾ ರಾವ್
Updated on: 

ಹಾಸನ: ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರು ಹಾಸನಾಂಬೆ ದರ್ಶನ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಅಧಿಕೃತ ಶಿಷ್ಟಾಚಾರದ ಸೌಲಭ್ಯ ಬಳಸಿಕೊಂಡು ದೇವಾಲಯಕ್ಕೆ ಆಗಮಿಸಿದ್ದು, ದೇವಿಯ ದರ್ಶನ ಮಾಡಿದ್ದಾರೆ. ಆರೋಪಿಗೆ ಪ್ರೊಟೋಕಾಲ್ ದರ್ಶನ ಕೊಟ್ಟಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ದೇವಸ್ಥಾನದ ಆವರಣಕ್ಕೆ ಸಾಮಾನ್ಯ ಭಕ್ತರ ಸಾಲಿನಲ್ಲಿ ಬರದೇ, ಸರ್ಕಾರದ ವಿಶೇಷ ವಿಐಪಿ ಪ್ರೋಟೋಕಾಲ್ ವಾಹನದಲ್ಲಿ ಆಗಮಿಸಿದ ರನ್ಯಾ ರಾವ್ ಕುಟುಂಬಕ್ಕೆ ಶೀಘ್ರ ಹಾಗೂ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯ ಬಳಿ ತೆರಳಿದ ನಟಿ ರನ್ಯಾ ರಾವ್ ಹಾಗೂ ತಂದೆ ರಾಮಚಂದ್ರ ರಾವ್ ಮತ್ತು ಕುಟುಂಬ ಶ್ರೀ ಹಾಸನಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.

ಸಾಮಾನ್ಯ ಭಕ್ತಾದಿಗಳು ಹಾಸನಾಂಬೆಯ ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುತ್ತಿರುವಾಗ, ಗಂಭೀರ ಅಪರಾಧ ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಗೆ ಪ್ರೋಟೋಕಾಲ್ ಆಧಾರಿತ ವಾಹನ ವ್ಯವಸ್ಥೆ ಮತ್ತು ಸುಲಭ ದರ್ಶನದ ಸೌಲಭ್ಯ ಒದಗಿಸಿರುವುದು ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ತಮ್ಮ ತಂದೆಯ ನಿವೃತ್ತ ಅಧಿಕಾರದ ಪ್ರಭಾವ ಹಾಗೂ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ಅವರಿಗೆ ಈ ಪ್ರೋಟೋಕಾಲ್ ಸೌಲಭ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ರೈಲು, ಬಸ್‌ ಸೇರಿದಂತೆ ನಾನಾ ವಾಹನಗಳ ಮೂಲಕ ಮಧ್ಯರಾತ್ರಿಯಿಂದಲೇ ಹಾಸನ ನಗರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು. ಪರಿಣಾಮ ಧರ್ಮದರ್ಶನದ ಸಾಲು ಭಕ್ತರಿಂದ ತುಂಬಿ ತುಳುಕುತ್ತಿತ್ತು.

ಅಕ್ರಮವಾಗಿ ದುಬೈನಿಂದ 12.56 ಕೋಟಿ ರು. ಮೌಲ್ಯದ 14.2 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಬಳಿಕ ಡಿಆರ್‌ಐ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಅವರಿಗೆ ಡೀಫಾಲ್ಟ್ ಜಾಮೀನು ಸಿಕ್ಕಿತ್ತು.

 Ranya Rao
ಚಿನ್ನ ಕಳ್ಳಸಾಗಣೆ ಪ್ರಕರಣ: 1 ವರ್ಷದ ಬಳಿಕ ನಟಿ ರನ್ಯಾ ರಾವ್ ಗೆ ಜಾಮೀನು

ಆದರೆ, ''ಕಾಫೀಪೋಸಾ'' ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರಿಂದ ರನ್ಯಾ ರಾವ್ ಬಿಡುಗಡೆಗೊಂಡಿರಲಿಲ್ಲ. ಸುಮಾರು ಒಂದು ವರ್ಷದ ನಿಷೇಧಿತ ಬಂಧನವನ್ನು ಪೂರೈಸಿದ ಬಳಿಕ, 2026ರ ಎಪ್ರಿಲ್‌ನಲ್ಲಿ ಅವರು ಬಿಡುಗಡೆಯಾಗಿದ್ದಾರೆ. ಇತ್ತೀಚೆಗಷ್ಟೇ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್‌ಗೆ ಭಾರಿ ಮೊತ್ತದ ದಂಡ ವಿಧಿಸಿ, ಕಠಿಣ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X