ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!

ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಹಾರಾಟ ಆರಂಭಿಸಿದ ಕೇವಲ ಎರಡು ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 1.14ಕ್ಕೆ ಹೆಲಿಕಾಪ್ಟರ್ ವಾಯು ಸಂಚಾರ ನಿಯಂತ್ರಣ ಕೇಂದ್ರದ (ATC) ಸಂಪರ್ಕ ಕಳೆದುಕೊಂಡಿದೆ.
Six Bengaluru pilgrims returning from Kedarnath and Badrinath died when their helicopter crashed en route to Dehradun, along with the pilot.
ಹೆಲಿಕಾಪ್ಟರ್ ಪತನಗೊಂಡಿರುವ ಸ್ಥಳ.
Updated on: 

ಬೆಂಗಳೂರು: ಚಾರ್‌ಧಾಮ್ ಯಾತ್ರೆ ಮುಗಿಸಿ ನೆಮ್ಮದಿಯಿಂದ ಮನೆಗೆ ಮರಳಬೇಕಿದ್ದ ಆರು ಮಂದಿಯ ಪಾಲಿಗೆ ಉತ್ತರಾಖಂಡದ ಆಕಾಶಯಾನವೇ ಕೊನೆಯ ಪ್ರಯಾಣವಾಗಿದೆ.

ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನಗೊಂಡು ಬೆಂಗಳೂರಿನ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ. ಆದರೆ, ಈ ದುರಂತಕ್ಕೂ ಮುನ್ನವೇ ಹವಾಮಾನ ಇಲಾಖೆ ಉತ್ತರಾಖಂಡದಾದ್ಯಂತ ಯಲ್ಲೋ ಅಲರ್ಟ್ ಘೋಷಿಸಿತ್ತು ಎಂದು ತಿಳಿದುಬಂದಿದೆ.

ಪ್ರತಿಕೂಲ ಹವಾಮಾನದ ನಡುವೆಯೂ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದ್ದು ಹೇಗೆ? ಮುನ್ನೆಚ್ಚರಿಕೆ ಇದ್ದರೂ ಈ ದುರಂತ ಸಂಭವಿಸಿದ್ದೇಕೆ ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹೆಲಿಕಾಪ್ಟರ್ ಮಧ್ಯಾಹ್ನ 1.12ಕ್ಕೆ ಬದರಿನಾಥದ ನಾಗರಿಕ ಹೆಲಿಪ್ಯಾಡ್‌ನಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಪ್ರಯಾಣ ಬೆಳೆಸಿತ್ತು.

ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಹಾರಾಟ ಆರಂಭಿಸಿದ ಕೇವಲ ಎರಡು ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 1.14ಕ್ಕೆ ಹೆಲಿಕಾಪ್ಟರ್ ವಾಯು ಸಂಚಾರ ನಿಯಂತ್ರಣ ಕೇಂದ್ರದ (ATC) ಸಂಪರ್ಕ ಕಳೆದುಕೊಂಡಿದೆ.

ಚಮೋಲಿ ಜಿಲ್ಲೆಯ ಜ್ಯೋತಿರ್ಮಠ ಪ್ರದೇಶದ ಚಾಯೀ ಗ್ರಾಮದ ಸಮೀಪವಿರುವ ಹಾಥಿ ಪಹಾಡ್‌ನ ಹಿಂಭಾಗದಲ್ಲಿ ಹೆಲಿಕಾಪ್ಟರ್ ಪತನಗೊಳ್ಳುವುದನ್ನು ಮೊದಲು ಗಮನಿಸಿದ ಸೇನಾ ಸಿಬ್ಬಂದಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನ್ವಾರ್ ತಿಳಿಸಿದ್ದಾರೆ.

ಸೇನೆ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಆರು ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Six Bengaluru pilgrims returning from Kedarnath and Badrinath died when their helicopter crashed en route to Dehradun, along with the pilot.
ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಸಾವು; Video

ಹವಾಮಾನ ತೀವ್ರವಾಗಿ ಹದಗೆಟ್ಟಿದ್ದು, ಮಳೆಯಾಗುತ್ತಿತ್ತು. ಹೆಲಿಕಾಪ್ಟರ್ ಪತನಗೊಂಡ ಸ್ಥಳ ದಟ್ಟ ಅರಣ್ಯ ಪ್ರದೇಶದಲ್ಲಿದೆ. ಹೆಲಿಕಾಪ್ಟರ್ ಸಂಪೂರ್ಣ ಸುಟ್ಟುಹೋಗಿದ್ದು, ಯಾರೂ ಬದುಕುಳಿದಿಲ್ಲ. ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿವೆ. ಶನಿವಾರ ಅವುಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಡೆಹ್ರಾಡೂನ್‌ಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಮೃತ ಪ್ರಯಾಣಿಕರೆಲ್ಲರೂ ಬೆಂಗಳೂರಿನವರಾಗಿದ್ದು, ಚಾರ್‌ಧಾಮ್ ಯಾತ್ರೆಯ ಪ್ರಮುಖ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದರಿನಾಥ ದರ್ಶನ ಮುಗಿಸಿ ಡೆಹ್ರಾಡೂನ್‌ಗೆ ಹಿಂದಿರುಗುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ದೆಹಲಿ ಮೂಲದ ಪೈಲಟ್ ಸೇರಿದಂತೆ ಎಲ್ಲ ಆರು ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ.

ಇನ್ನೊಂದೆಡೆ, ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಉತ್ತರಾಖಂಡದ ಎಲ್ಲ ಜಿಲ್ಲೆಗಳಿಗೆ ರಾಜ್ಯವ್ಯಾಪಿ ಯಲ್ಲೋ ಅಲರ್ಟ್ ನೀಡಿತ್ತು ಎಂದು ಮೂಲಗಳು ತಿಳಿಸಿವೆ. ಹವಾಮಾನ ವೈಪರೀತ್ಯದ ಎಚ್ಚರಿಕೆ ಇದ್ದರೂ ಹೆಲಿಕಾಪ್ಟರ್ ಹಾರಾಟಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂಬುದು ಸ್ಪಷ್ಟವಾಗಿಲ್ಲ.

ಈ ದುರಂತದ ಅಧಿಕೃತ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ಶುಕ್ರವಾರ ಸಂಜೆ ನೀಡಲಾಗಿದೆ. ಮೃತರ ಕೆಲವು ಕುಟುಂಬ ಸದಸ್ಯರು ಈಗಾಗಲೇ ಡೆಹ್ರಾಡೂನ್‌ಗೆ ತೆರಳಿದ್ದಾರೆ. ಉಳಿದವರೂ ಶೀಘ್ರದಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ಮೃತದೇಹಗಳನ್ನು ಗುರುತಿಸುವಲ್ಲಿ ತೊಂದರೆಯಾದರೆ ಕುಟುಂಬ ಸದಸ್ಯರಿಂದ ಡಿಎನ್‌ಎ ಮಾದರಿಗಳನ್ನು ಪಡೆಯಲು ಮನವಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅಗತ್ಯವಿರುವ ಎಲ್ಲ ವೆಚ್ಚಗಳನ್ನು ರಾಜ್ಯ ಸರ್ಕಾರವೇ ಭರಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X