

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಚಿನ್ನತಂಬಿ ಚಿನ್ನದ ಹಗರಣದ ಬೆನ್ನಲ್ಲೇ, ನಗರದ ವಿವೇಕಾನಂದ ವೃತ್ತದ 'ಮೋಹನ್ ಜ್ಯುವೆಲರಿ' ಸಂಸ್ಥೆಯಿಂದ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಮತ್ತೊಂದು ಗೋಲ್ಡ್ ಸ್ಕ್ಯಾಮ್ ಬೆಳಕಿಗೆ ಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹಾಗೂ ಮಳಿಗೆಯ ಮಾಲೀಕ ಮೋಹನ್ ಲಾಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಮೋಹನ್ ಜ್ಯುವೆಲರಿ ಮಾಲೀಕ ಮೋಹನ್ ಲಾಲ್ ಗ್ರಾಹಕರಿಗಾಗಿ ವಿಶೇಷ ಮಾಸಿಕ ಕಂತುಗಳ (EMI) ಚಿನ್ನದ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದ. 15 ತಿಂಗಳ ಕಾಲ ನಿಯಮಿತವಾಗಿ ಕಂತು ಕಟ್ಟಿದರೆ, ಜ್ಯುವೆಲರಿ ವತಿಯಿಂದ 2 ತಿಂಗಳ ಬೋನಸ್ ನೀಡುವುದಾಗಿ ಆಮಿಷ ಒಡ್ಡಿದ್ದ. ಅದರಂತೆ, ಕಳೆದ ಎರಡು ಆವೃತ್ತಿಗಳಲ್ಲಿ ಗ್ರಾಹಕರಿಂದ ನಿರಂತರ ಹಣ ಪಡೆದು, ಭರವಸೆ ನೀಡಿದಂತೆಯೇ ಚಿನ್ನದ ಆಭರಣಗಳನ್ನು ವಿತರಿಸಿ ಜನರ ಸಂಪೂರ್ಣ ನಂಬಿಕೆ ಗಳಿಸಿದ್ದ. ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಮೂರನೇ ಬಾರಿ ನೂರಾರು ಗ್ರಾಹಕರು, ಹೆಣ್ಣುಮಕ್ಕಳ ಮದುವೆ ಹಾಗೂ ಇತರೆ ಕಾರ್ಯಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಮಾಸಿಕ ಕಂತುಗಳ ರೂಪದಲ್ಲಿ ಜಮೆ ಮಾಡಿದ್ದರು.
ಕಾರ್ಡ್ ಮೂಲಕ ಹಣ ಸಂಗ್ರಹ:
ವಿಶೇಷ ಮಾಸಿಕ ಕಂತುಗಳ ಚಿನ್ನದ ಉಳಿತಾಯ ಯೋಜನೆಯ ಕಾರ್ಡ್ ಪಡೆದ ಗ್ರಾಹಕರು ಪ್ರತಿ ತಿಂಗಳು ಕನಿಷ್ಠ 500 ರೂಪಾಯಿಯಿಂದ ಹಿಡಿದು ತಮಗೆ ಸಾಧ್ಯವಾದಷ್ಟು ಹಣವನ್ನು ಜಮಾ ಮಾಡಬಹುದೆಂದು ತಿಳಿಸಲಾಗಿತ್ತು. ಇದನ್ನು ನಂಬಿದ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ನೂರಾರು ಜನರು ತಮ್ಮ ದುಡಿಮೆಯ ಹಣವನ್ನು ಪ್ರತಿ ತಿಂಗಳು ಪ್ರಾಮಾಣಿಕವಾಗಿ ಪಾವತಿಸುತ್ತಾ ಬಂದಿದ್ದರು.
ಹಾಗಾದ್ರೆ, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಒಂದು ವಾರದಿಂದ ವಿವೇಕಾನಂದ ವೃತ್ತದಲ್ಲಿರುವ ಮೋಹನ್ ಜ್ಯುವೆಲರಿ ಮಳಿಗೆ ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಬಂದ್ ಆಗಿತ್ತು. ಇನ್ನು, ಹಣ ಕಟ್ಟಿದ್ದ ಗ್ರಾಹಕರು ಅಂಗಡಿಗೆ ಬಂದು ವಿಚಾರಿಸಿದಾಗ ಮಾಲೀಕ ಮೋಹನ್ ಲಾಲ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ರಾತ್ರೋರಾತ್ರಿ ಕುಟುಂಬದೊಂದಿಗೆ ಮನೆ ಖಾಲಿ ಮಾಡಿ ಊರು ಬಿಟ್ಟಿರುವುದು ಪತ್ತೆಯಾಗಿದೆ. ಇದಾದ ನಂತರ ವಂಚನೆಗೊಳಗಾದ ಗ್ರಾಹಕರೆಲ್ಲರೂ ಒಟ್ಟಾಗಿ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಇನ್ನು, ಗ್ರಾಹಕರ ದೂರಿನ ಮೇರೆಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು ಆರೋಪಿ ಮೋಹನ್ ಲಾಲ್‌ನನ್ನು ಸೆಪ್ಟೆಂಬರ್ 2 ರ ರಾತ್ರಿ ಜ್ಯುವೆಲರಿ ಶಾಪ್ ಸಮೀಪವೇ ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ಎನ್ನಲಾದ ಈತನ ತಲೆಮರೆಸಿಕೊಂಡಿರುವ ಮಗನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.