'ಅಗತ್ಯವಿದ್ದರೆ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ': ಪ್ರಧಾನಿ ಮೋದಿ ಸಲಹೆ; Video

ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಜನರಿಗೆ ಕರೆ ನೀಡಿದ ಮೋದಿ, ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವಂತೆ ಸಲಹೆ ನೀಡಿದರು.
PM Narendra Modi
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮ, ದೆಹಲಿಯ ಜಂತರ್ ಮಂತರ್ ನಲ್ಲಿ ಜೆನ್-ಝೀಗಳ ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೀಗ ಇಂದು ಮತ್ತೆ ವಿಡಿಯೊ ಮೂಲಕ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಭಾರತವು ಶೇ.7.8ರ ಆರ್ಥಿಕ ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಈ ಸಾಧನೆಯಿಂದ ದೇಶವೇ ಸಂತಸದಿಂದ ತುಂಬಿದೆ ಎಂದು ಹೇಳಿದರು.

ದೇಶದ ಜನರ ಸಾಮೂಹಿಕ ಪ್ರಯತ್ನಗಳಿಂದ ಈ ಬಲಿಷ್ಠ ಆರ್ಥಿಕ ಬೆಳವಣಿಗೆ ಸಾಧ್ಯವಾಗಿದೆ ಎಂದು ಸಂತಸದಿಂದ ಹೇಳಿಕೊಂಡರು.

ದೇಶವಾಸಿಗಳ ಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ. ಜಗತ್ತು ಸಂಘರ್ಷಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ಬೆಳವಣಿಗೆ ಸಾಧಿಸಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ ಎಂದರು.

ಇಂದು ಬೆಳಗ್ಗೆ ವಿಡಿಯೋ ಸಂದೇಶ ನೀಡಿದ ಪ್ರಧಾನಿ ಮೋದಿ, ಜಗತ್ತು ಯುದ್ಧದ ಭೀತಿಯ ವಾತಾವರಣದಲ್ಲಿ ಮುಳುಗಿದೆ. ಎಲ್ಲೆಡೆಯಿಂದಲೂ ಯುದ್ಧದ ಸುದ್ದಿಗಳು ಬರುತ್ತಿವೆ. ಜಗತ್ತು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ. ಜನತೆಗೆ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 2020ರ ಕೋವಿಡ್‌ ಅವಧಿಯಿಂದ ಇಲ್ಲಿಯವರೆಗೆ ಎಲ್ಲಿಯೂ ಸ್ಥಿರತೆ ಕಾಣಿಸುತ್ತಿಲ್ಲ. ಇಷ್ಟಾದರೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದರು.

PM Narendra Modi
‘ದೇಶ ಸಂತಸದಿಂದ ತುಂಬಿದೆ, ಆದರೆ ಕೆಲವರು ಸುಳ್ಳು ಹೇಳಿ ಜನರಲ್ಲಿ ನಿರಾಶೆ ಮೂಡಿಸಲು ಯತ್ನಿಸುತ್ತಿದ್ದಾರೆ': ವಿಡಿಯೊ ಮೂಲಕ ಪ್ರಧಾನಿ ಮೋದಿ ಹೇಳಿದ್ದೇನು? ; Video

ದೇಶದ ನಾಗರಿಕರಿಗೆ ಪ್ರಧಾನಿ ಮೋದಿಯ ಸಲಹೆಯೇನು?

ಈ ಎಲ್ಲ ಅಡೆತಡೆಗಳನ್ನು ಮೀರಿ, ಎಲ್ಲ ರೀತಿಯ ಮಾತುಗಳನ್ನು ಹಿಂದಿಕ್ಕಿ ದೇಶವು ಶೇ.7.8ರ ಬೆಳವಣಿಗೆ ಸಾಧಿಸಿದೆ. ನಾವು ಈ ವೇಗವನ್ನು ಕಾಯ್ದುಕೊಂಡು ಮುಂದೆ ಸಾಗಬೇಕು. ಅದಕ್ಕಾಗಿ ಆತ್ಮನಿರ್ಭರ ಭಾರತವಾಗುವುದು ಬಹಳ ಮುಖ್ಯ. ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಜನರಿಗೆ ಕರೆ ನೀಡಿದ ಮೋದಿ, ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವಂತೆ ಸಲಹೆ ನೀಡಿದರು.

ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸಕ್ಕೆ ಹೋಗುವುದಾದರೆ, ನೀವು ಹೋಗಬಾರದು. ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ನಡೆಸುವುದನ್ನೂ ತಪ್ಪಿಸಬೇಕು. ‘ಮೇಡ್ ಇನ್ ಇಂಡಿಯಾ’ ಎಂಬ ಮಂತ್ರವನ್ನು ಪಾಲಿಸಬೇಕು. ಅಗತ್ಯವಿಲ್ಲದಿದ್ದರೆ ಚಿನ್ನವನ್ನೂ ಖರೀದಿಸಬಾರದು ಎಂದು ಅವರು ದೇಶವಾಸಿಗಳಿಗೆ ಮತ್ತೊಮ್ಮೆ ಮನವಿ ಮಾಡಿದರು.

ವಿಪಕ್ಷ ನಾಯಕರ ಮೇಲೆ ಟೀಕೆ

ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇನ್ನೊಂದೆಡೆ, ಭಾರತದೊಳಗೇ ಕೆಲವರು ನಿರಾಶೆಯಲ್ಲಿ ಮುಳುಗಿ, ಸುಳ್ಳುಗಳನ್ನು ಹರಡುತ್ತಾ ಎಲ್ಲೆಡೆ ನಕಾರಾತ್ಮಕತೆಯನ್ನು ಹರಡುವುದರಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ನೀಡಿದ ಮೋದಿ, “ನಾವು ಸ್ವದೇಶಿಗೆ ಎಷ್ಟು ಹೆಚ್ಚು ಒತ್ತು ನೀಡುತ್ತೇವೆಯೋ, ಅಷ್ಟೇ ಹೆಚ್ಚು ಆತ್ಮನಿರ್ಭರತೆಗೆ ಒತ್ತು ನೀಡುತ್ತೇವೆ. ಭಾರತದ ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ವೇಳೆಗೆ ನಮ್ಮ ಯುವ ಪೀಳಿಗೆಗೆ ವಿಕಸಿತ ಭಾರತವನ್ನು ಉಡುಗೊರೆಯಾಗಿ ನೀಡುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಇಂದು ನಮ್ಮ ಪರಿಶ್ರಮದ ಮೂಲಕ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುತ್ತೇವೆ ಎಂದು ಹೇಳಿದರು.

ದೇಶವಾಸಿಗಳೇ, ನಮ್ಮ ಕಠಿಣ ಪರಿಶ್ರಮದಲ್ಲಿ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳೋಣ. ನಮ್ಮ ನೀತಿ ಸರಿಯಾಗಿದೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. 140 ಕೋಟಿ ದೇಶವಾಸಿಗಳ ಶಕ್ತಿ ಇಂದು ದೇಶವನ್ನು ಒಟ್ಟಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಬನ್ನಿ, ನಾವೂ ಈ ಸಾಧನೆಯನ್ನು ಸಂಭ್ರಮಿಸೋಣ ಎಂದು ಕರೆ ನೀಡಿದರು.

ವಿಕಸಿತ ಭಾರತ ನಿರ್ಮಾಣಕ್ಕೆ ಸಾಮೂಹಿಕ ಸಂಕಲ್ಪ ಕೈಗೊಳ್ಳುವಂತೆ ಕರೆ ನೀಡಿದ ಮೋದಿ, ಒಂದು ಸಂಕಲ್ಪ ಕೈಗೊಳ್ಳಿ. ಆ ಸಂಕಲ್ಪವನ್ನು ಈಡೇರಿಸಲು ನನ್ನೊಂದಿಗೆ ಹೆಜ್ಜೆ ಹಾಕಿ. ನಿಮಗೆ ಅನಂತ ಶುಭಾಶಯಗಳು, ಅನಂತ ಅಭಿನಂದನೆಗಳು ಎಂದು ಹೇಳಿದರು.

ನಿನ್ನೆ ಸೋಮವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಇರಾನ್‌ನಲ್ಲಿನ ಯುದ್ಧ ಮತ್ತು ಅದರಿಂದ ಉಂಟಾಗಿರುವ ಜಾಗತಿಕ ಅನಿಶ್ಚಿತತೆ ಭಾರತದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕಗಳ ನಡುವೆಯೂ, 2026-27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ.

ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಶೇ.7.8ರಷ್ಟು ಬೆಳವಣಿಗೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಆರ್ಥಿಕ ಕುಸಿತ ಉಂಟಾಗಬಹುದು ಎಂಬ ಆತಂಕಗಳ ನಡುವೆಯೂ ದೇಶದ ಆರ್ಥಿಕತೆ ತನ್ನ ಸ್ಥಿರತೆಯನ್ನು ಪ್ರದರ್ಶಿಸಿದೆ.

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ಹಿಂದಿನ ತ್ರೈಮಾಸಿಕದ ಶೇ.8.6ರ ಭರ್ಜರಿ ಬೆಳವಣಿಗೆಗೆ ಹೋಲಿಸಿದರೆ ಕಡಿಮೆಯಾಗಿದೆ. ಆದರೂ, ಸಂಘರ್ಷ ಆರಂಭಗೊಂಡು ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟಾದ ಸಂದರ್ಭದಲ್ಲಿ ನಿರೀಕ್ಷಿಸಲಾಗಿದ್ದ ಬೆಳವಣಿಗೆಗಿಂತ ಇದು ಗಣನೀಯವಾಗಿ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com