

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವ ವೇಳೆ ನಾಣ್ಯಗಳು ಸಿಕ್ಕಿದ್ದು, ಒಟ್ಟು 54.8 ಗ್ರಾಂ ತೂಕ ಹೊಂದಿರುವ ಇವುಗಳ ಮೌಲ್ಯ ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ.
ನಾಣ್ಯಗಳು ಪತ್ತೆಯಾದ ಕೂಡಲೇ ಕೂಲಿ ಕಾರ್ಮಿಕರು ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಹಸ್ತಾಂತರಿಸಲಾಗಿದೆ. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾನೆಗೆ ಒಪ್ಪಿಸಲಾಗಿದೆ.
ಪತ್ತೆಯಾದ ನಾಣ್ಯಗಳ ಮೇಲೆ ಆನೆಯ ಚಿತ್ರ ಇರುವುದಾಗಿ ತಿಳಿದುಬಂದಿದೆ. ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿದ್ದ ಹಿನ್ನೆಲೆಯಲ್ಲಿ, ಈ ನಾಣ್ಯಗಳು ಗಂಗರ ಕಾಲಕ್ಕೆ ಸಂಬಂಧಿಸಿರಬಹುದೇ ಎಂಬ ಕುತೂಹಲ ಮೂಡಿದೆ. ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿದವು ಎಂಬ ಅನುಮಾನ ವ್ಯಕ್ತವಾಗಿದೆ.
ಆದರೆ ನಾಣ್ಯಗಳ ನಿಖರ ಕಾಲಘಟ್ಟ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಖಚಿತಪಡಿಸಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಸಿಕ್ಕರೂ ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಸವದತ್ತಿ ತಾಲೂಕು ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ನಾಣ್ಯಗಳ ಐತಿಹಾಸಿಕ ಮಹತ್ವ, ಮೂಲ ಮತ್ತು ನಿಖರವಾದ ಅವಧಿಯ ಮೌಲ್ಯಮಾಪನಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅವುಗಳ ಗೋಚರತೆಯ ಆಧಾರದ ಮೇಲೆ, ನಾಣ್ಯಗಳು 800 ರಿಂದ 1,000 ವರ್ಷಗಳಷ್ಟು ಹಳೆಯದಾಗಿವೆ ಎಂದು ತಾತ್ಕಾಲಿಕವಾಗಿ ಶಂಕಿಸಲಾಗಿದೆ. ಪುರಾತತ್ವ ಇಲಾಖೆಯ ಪರೀಕ್ಷೆಯ ನಂತರವೇ ನಾಣ್ಯಗಳ ನಿಜವಾದ ಅವಧಿ, ಐತಿಹಾಸಿಕ ಮಹತ್ವ ಮತ್ತು ಅಧಿಕೃತ ಮೌಲ್ಯವನ್ನು ಸ್ಥಾಪಿಸಬಹುದು ಎಂದು ತಿಳಿದು ಬಂದಿದೆ.