Krishna Byre Gowda
ಸಚಿವ ಕೃಷ್ಣ ಬೈರೇಗೌಡ

ರಸ್ತೆ ಸಾರ್ವಜನಿಕ ಆಸ್ತಿ, ಕಾರು ಮಾಲೀಕರ ಸ್ವತ್ತಲ್ಲ: ಸಂಚಾರ ದಟ್ಟಣೆ ಕಡಿಮೆಯಾಗಬೇಕಾದರೆ ಪಾರ್ಕಿಂಗ್ ನಿಯಂತ್ರಣ ಅಗತ್ಯ; ಸಚಿವ ಕೃಷ್ಣ ಬೈರೇಗೌಡ (INTERVIEW)

Published on

ಜನರು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಹೊಂದಲು ಸದಾ ಬಯಸುತ್ತಾರೆ. ಹೀಗಾಗಿ ವಾಹನ ಖರೀದಿಸಬೇಡಿ ಎಂದು ಹೇಳುವುದು ಪರಿಹಾರವಲ್ಲ. ಸರ್ಕಾರವು ಸಾಮೂಹಿಕ ಸಾರಿಗೆ ವ್ಯವಸ್ಥೆಯಲ್ಲಿ ಭಾರಿ ಹೂಡಿಕೆ ಮಾಡಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರಿಗೆ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಜೊತೆಗೆ ಸುರಂಗ ರಸ್ತೆ ಸೇರಿದಂತೆ ಸಾಕಷ್ಟು ರಸ್ತೆ ಸಾಮರ್ಥ್ಯವೂ ಅಗತ್ಯವಿದೆ. ಸಾರ್ವಜನಿಕ ಸಾರಿಗೆ ಅಥವಾ ರಸ್ತೆ ಮೂಲಸೌಕರ್ಯದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹೆಚ್ಚುತ್ತಿರುವ ಸಂಚಾರದ ಅಗತ್ಯಗಳನ್ನು ಪೂರೈಸಲು ಬೆಂಗಳೂರಿಗೆ ಎರಡೂ ಬೇಕು.

ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಆಡಳಿತ ಪುನರ್‌ರಚನೆಯಿಂದ ಹಿಡಿದು ಸಂಚಾರ ದಟ್ಟಣೆ, ಸುರಂಗ ರಸ್ತೆ, ಪಾರ್ಕಿಂಗ್ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಮಳೆನೀರು ಸಮಸ್ಯೆ, ಆಸ್ತಿ ತೆರಿಗೆ ಸಂಗ್ರಹ, ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಹಾಗೂ ಬಿಎಂಎಲ್‌ಟಿಎ ಕಾಯ್ದೆಯ ಜಾರಿಯವರೆಗೆ ಹಲವು ಪ್ರಮುಖ ವಿಚಾರಗಳ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ನಡೆಸಿದ ಮುಕ್ತ ಸಂವಾದದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಂವಾದದ ಆಯ್ದ ಭಾಗ ಇಲ್ಲಿದೆ...

Q

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸ್ಥಾಪನೆಯಾಗಿ ಒಂದು ವರ್ಷವಾಗಿದೆ. ಇಲ್ಲಿಯವರೆಗೆ ಅದರ ಕಾರ್ಯನಿರ್ವಹಣೆಯನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ?

A

ಆಡಳಿತ ಸುಧಾರಣೆಗೆ ಅಗತ್ಯವಿರುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಒಂದೇ ನಿಗಮದ ಮೂಲಕ 1.5 ಕೋಟಿ ಜನಸಂಖ್ಯೆಯ ನಗರವನ್ನು ನಿರ್ವಹಿಸುವುದು ಸಾಧ್ಯವಾಗುತ್ತಿರಲಿಲ್ಲ. ಐದು ನಿಗಮಗಳು, ಐದು ಆಯುಕ್ತರು ಮತ್ತು ಮುಂದೆ ಐದು ಚುನಾಯಿತ ಸಂಸ್ಥೆಗಳು ಬಂದರೆ ಆಡಳಿತವು ಜನರಿಗೆ ಹೆಚ್ಚು ಸುಲಭವಾಗಿ ತಲುಪಲಿದೆ ಹಾಗೂ ಸ್ಪಂದಿಸುವಂತೆ ಮಾಡುತ್ತದೆ.

ಜೊತೆಗೆ, ಜಿಬಿಎ ವಿವಿಧ ನಿಗಮಗಳು ಮತ್ತು ಇತರ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು ಉತ್ತಮ ಆರಂಭ ಎಂದು ನಾನು ನಂಬುತ್ತೇನೆ. ಕಾಲಕ್ರಮೇಣ ಇದು ಇನ್ನಷ್ಟು ಪರಿಣಾಮಕಾರಿಯಾಗಲಿದೆ.

Q

ಬೆಂಗಳೂರಿನ ಆಡಳಿತ ವ್ಯವಸ್ಥೆಯ ಪುನರ್‌ರಚನೆ ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದು ಭಾವಿಸುತ್ತೀರಾ?

A

ಹೌದು. ಈಗ ನಮ್ಮಲ್ಲಿ ಐದು ನಿಗಮಗಳು ಮತ್ತು ಜಿಬಿಎ ಇವೆ. ಕನಿಷ್ಠ 40 ವರ್ಷಗಳಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಆಡಳಿತ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಮರುಚಿಂತನೆ ನಡೆದಿದೆ.

ಈ ಹಿಂದೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆಯಡಿ ನಗರವನ್ನು ನಿರ್ವಹಿಸಲಾಗುತ್ತಿತ್ತು. ಅದಕ್ಕೆ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆ ಇರಲಿಲ್ಲ. ಈ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿದ್ದರೂ, ಬೆಂಗಳೂರಿನ ಆಡಳಿತವನ್ನು ಪುನರ್‌ರಚಿಸುವ ಮೊದಲ ಸಮಗ್ರ ಪ್ರಯತ್ನ ಇದಾಗಿದೆ. ವಿವಿಧ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವ ಹಿನ್ನೆಲೆಯಲ್ಲಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸ ಇದಾಗಿದೆ ಎಂದು ನಾನು ಭಾವಿಸುತ್ತೇನೆ. ಈಗ ಇದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಿದೆ.

Q

ಅಧಿಕಾರಿಗಳ ವಿರುದ್ಧ ಪರಿಶೀಲನೆ ಮತ್ತು ಕ್ರಮ ಕೈಗೊಳ್ಳುತ್ತಿದ್ದರೂ ಅವರಲ್ಲಿ ನಿರ್ಲಕ್ಷ್ಯ ಮನೋಭಾವ ಏಕೆ ಕಾಣಿಸುತ್ತಿದೆ?

A

ಇದು 25 ವರ್ಷಗಳ ನಿರ್ಲಕ್ಷ್ಯ ಮತ್ತು ಕಳಪೆ ಆಡಳಿತದ ಪರಿಣಾಮ. ಕಾಲಕ್ರಮೇಣ ನಗರದ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದೆ. ಅದನ್ನು ಸರಿಪಡಿಸಲು ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ.

2006-07ರಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ವಿಸ್ತರಿಸಿದ ರೀತಿಯೂ ಪ್ರಮುಖ ಕಾರಣ. ಆಗ ಬೆಂಗಳೂರಿನ ವ್ಯಾಪ್ತಿಯನ್ನು ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸದೆ ಮೂರು ಪಟ್ಟು ಹೆಚ್ಚಿಸಲಾಯಿತು. ವಿಸ್ತರಣೆ ಮಾಡಿದ್ದೇ ಸಮಸ್ಯೆಯಲ್ಲ; ಅಗತ್ಯ ಆಡಳಿತ ವ್ಯವಸ್ಥೆಯನ್ನು ರೂಪಿಸದೆ ವಿಸ್ತರಣೆ ಮಾಡಿದ್ದೇ ಸಮಸ್ಯೆ. ನಾವು ಇಂದು ನೋಡುತ್ತಿರುವ ಆಡಳಿತಾತ್ಮಕ ಅಸಮರ್ಪಕತೆಗೆ ಆ ನಿರ್ಧಾರ ಪ್ರಮುಖ ಕಾರಣವಾಯಿತು. ಒಂಟೆಯ ಬೆನ್ನನ್ನು ಮುರಿದ ಕೊನೆಯ ಹುಲ್ಲಿನ ಕಡ್ಡಿಯಂತಾಯಿತು.

Q

ಸರ್ಕಾರವು ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಆದರೆ, ನಾಗರಿಕರು ಒಕ್ಕೊರಲಿನಿಂದ ವಿರೋಧಿಸುತ್ತಿರುವ ಸುರಂಗ ರಸ್ತೆ ಯೋಜನೆಯನ್ನೂ ಸರ್ಕಾರ ಬೆಂಬಲಿಸುತ್ತಿದೆ. ಇದನ್ನು ಹೇಗೆ ಸಮರ್ಥಿಸುತ್ತೀರಿ?

A

ಬೆಂಗಳೂರಿನ ಸಮಸ್ಯೆಗಳಿಗೆ, ಅದರಲ್ಲೂ ಸಂಚಾರ ದಟ್ಟಣೆಗೆ, ಪ್ರಾಯೋಗಿಕ ಹಾಗೂ ಸಮಗ್ರ ಪರಿಹಾರಗಳ ಅಗತ್ಯವಿದೆ. ವರ್ಷಗಳು ಕಳೆದಂತೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅದೇ ಸಮಯದಲ್ಲಿ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯವೂ ಹೆಚ್ಚಾಗಿದೆ.

ಉದಾಹರಣೆಗೆ, ಹಿಂದೆ ಕಡಿಮೆ ಸಮಯದಲ್ಲಿ ಕ್ರಮಿಸಬಹುದಾಗಿದ್ದ ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್‌ವರೆಗಿನ ಮಾರ್ಗವನ್ನು ಈಗ ಹಲವು ಕಡೆಗಳಲ್ಲಿನ ಸಂಚಾರ ದಟ್ಟಣೆಯಿಂದಾಗಿ ಕ್ರಮಿಸಲು ಹೆಚ್ಚು ಸಮಯ ಬೇಕಾಗುತ್ತದೆ.

ಜನರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಹೊಂದಲು ಮುಂದುವರಿಯುತ್ತಾರೆ. ಹೀಗಾಗಿ ವಾಹನ ಖರೀದಿಸಬೇಡಿ ಎಂದು ಹೇಳುವುದು ಪರಿಹಾರವಲ್ಲ. ಅದೇ ಸಮಯದಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಯಲ್ಲಿ ನಾವು ಭಾರಿ ಹೂಡಿಕೆ ಮಾಡಬೇಕಿದೆ. ಇದು ಸಾರ್ವಜನಿಕ ಸಾರಿಗೆ ಅಥವಾ ರಸ್ತೆ ಮೂಲಸೌಕರ್ಯದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪ್ರಶ್ನೆಯಲ್ಲ. ಹೆಚ್ಚುತ್ತಿರುವ ಸಂಚಾರದ ಅಗತ್ಯಗಳನ್ನು ಪೂರೈಸಲು ಬೆಂಗಳೂರಿಗೆ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಜೊತೆಗೆ ಸಾಕಷ್ಟು ರಸ್ತೆ ಸಾಮರ್ಥ್ಯವೂ ಬೇಕಿದೆ.

Q

ಈ ಪರಿಹಾರಗಳನ್ನು ಪರಸ್ಪರ ಪೂರಕವಾಗಿ ನೋಡುವ ಬದಲು ಪರಸ್ಪರ ಸ್ಪರ್ಧಾತ್ಮಕವಾಗಿ ನೋಡಲಾಗುತ್ತಿದೆ ಎಂದು ಭಾವಿಸುತ್ತೀರಾ?

A

ಸಮಸ್ಯೆಯನ್ನು ನೋಡುವ ಇದು ಅತ್ಯಂತ ಸೀಮಿತ ದೃಷ್ಟಿಕೋನ ಎಂದು ನಾನು ಭಾವಿಸುತ್ತೇನೆ. ಬೆಂಗಳೂರು ಎಲ್ಲ ದಿಕ್ಕುಗಳಲ್ಲೂ ಬೆಳೆಯುತ್ತಿದೆ. ವಿವಿಧ ರೀತಿಯ ಸಾರಿಗೆ ವ್ಯವಸ್ಥೆಗಳ ಬೇಡಿಕೆಯೂ ಹೆಚ್ಚುತ್ತಿದೆ. ಬೆಂಗಳೂರು ಪ್ರಮುಖ ಆರ್ಥಿಕ ಕೇಂದ್ರವಾಗಿದ್ದು, ದೇಶದ ಕಚೇರಿ ಸ್ಥಳ ಬಳಕೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಹೂಡಿಕೆಯಲ್ಲಿ ಮಹತ್ವದ ಪಾಲು ಹೊಂದಿದೆ. ಹೀಗಾಗಿ ಮೆಟ್ರೋ, ಬಸ್, ಉಪನಗರ ರೈಲು ಅಥವಾ ರಸ್ತೆಗಳಲ್ಲಿ ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಶೂನ್ಯ ಮೊತ್ತದ ಆಟ ಇದಾಗಬಾರದು.

ನಮಗೆ ಇವೆಲ್ಲವೂ ಬೇಕು. ಮೆಟ್ರೋ ವಿಸ್ತರಣೆ ಅಗತ್ಯ. ಉಪನಗರ ರೈಲು ಅಗತ್ಯ. ಹೆಚ್ಚುವರಿ ಬಸ್‌ಗಳು ಅಗತ್ಯ. ಅದೇ ರೀತಿ ಹೆಚ್ಚಿನ ರಸ್ತೆ ಸಾಮರ್ಥ್ಯವೂ ಅಗತ್ಯ. ಈಗಾಗಲೇ ಬೆಂಗಳೂರು ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಜಾಲವನ್ನು ಹೊಂದಿದೆ. ಸುಮಾರು 7,000 ಬಸ್‌ಗಳೊಂದಿಗೆ ದೇಶದಲ್ಲೇ ಅತಿ ದೊಡ್ಡ ಬಸ್ ಪಡೆಯನ್ನೂ ಹೊಂದಿದೆ. ಇನ್ನೂ 5,000 ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.

ಈ ಪ್ರಯತ್ನಗಳ ಬಗ್ಗೆ ಆಗಾಗ್ಗೆ ಗಮನ ಹರಿಸಲಾಗುವುದಿಲ್ಲ. ನಾವು ಟೀಕೆ ಹಾಗೂ ಸಲಹೆಗಳಿಗೆ ಮುಕ್ತವಾಗಿದ್ದೇವೆ. ಆದರೆ ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಒಂದೇ ಪರಿಹಾರದಿಂದ ಬಗೆಹರಿಸಬಹುದು ಎಂಬ ಪೂರ್ವನಿರ್ಧರಿತ ನಿಲುವಿನ ಬದಲು ಇಡೀ ಚಿತ್ರವನ್ನು ನೋಡಬೇಕಾಗಿದೆ.

Q

ನಾಗರಿಕ ಶಿಸ್ತು ಬೆಂಗಳೂರಿನ ಪ್ರಮುಖ ಸವಾಲುಗಳಲ್ಲಿ ಒಂದು ಎಂದು ನೀವು ಹೇಳಿದ್ದೀರಿ. ಕಸ ಎಸೆಯುವುದು, ಅಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತಹ ಸಮಸ್ಯೆಗಳಲ್ಲಿ ಜನರ ವರ್ತನೆ ಬದಲಿಸುವುದು ಎಷ್ಟು ಕಷ್ಟ?

A

ಅಧಿಕಾರಿಗಳನ್ನು ನಿಭಾಯಿಸುವುದಕ್ಕಿಂತಲೂ ಜನರ ವರ್ತನೆ ಬದಲಿಸುವುದು ಬಹುಶಃ ಇನ್ನೂ ದೊಡ್ಡ ಸವಾಲು. ಸಂಚಾರದ ನಂತರ ಕಸ ಮತ್ತು ತ್ಯಾಜ್ಯ ಎಸೆಯುವಿಕೆ ಬೆಂಗಳೂರಿನ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ನಾಗರಿಕರ ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ವ್ಯವಸ್ಥೆ ಇಲ್ಲದಿದ್ದರೆ ಅದು ಸಂಪೂರ್ಣವಾಗಿ ಆಡಳಿತದ ಜವಾಬ್ದಾರಿ. ಆದರೆ ಕಸ ಸಂಗ್ರಹಿಸುವ ವ್ಯವಸ್ಥೆ ಇದ್ದರೂ ಜನರು ರಸ್ತೆ ಬದಿಯಲ್ಲಿ ಕಸ ಎಸೆಯಲು ಆಯ್ಕೆ ಮಾಡಿಕೊಂಡರೆ, ಆ ಮನಸ್ಥಿತಿಯನ್ನು ಬದಲಿಸುವುದು ಬಹಳ ಕಷ್ಟ.

ಜನರು ಸಾಮಾನ್ಯ ಕಸ ಸಂಗ್ರಹ ಕೇಂದ್ರವನ್ನು ಕೇಳುತ್ತಾರೆ. ಆದರೆ, ಈ ಸಮಸ್ಯೆಯನ್ನು ಸ್ವಲ್ಪ ವಿಶ್ಲೇಷಿಸೋಣ. ಸಾಮಾನ್ಯ ಸಂಗ್ರಹ ಕೇಂದ್ರವನ್ನು ಎಲ್ಲಿ ಸ್ಥಾಪಿಸಬೇಕು? ಮನೆ ಬಾಗಿಲಿನಲ್ಲೇ ಕಸ ಸಂಗ್ರಹಿಸುವ ವ್ಯವಸ್ಥೆ ಬಳಸಲು ಹಿಂಜರಿಯುವವರು ಕಸ ಹಾಕಲು ಎಷ್ಟು ದೂರ ಹೋಗಲು ಸಿದ್ಧರಿರುತ್ತಾರೆ? ಪ್ರತಿ 500 ಮೀಟರ್‌ಗೆ ಒಂದು ಕಸ ಸಂಗ್ರಹ ಕೇಂದ್ರ ಸ್ಥಾಪಿಸಬೇಕೆಂದರೆ ನಗರದಲ್ಲಿ ಎಷ್ಟು ಕೇಂದ್ರಗಳು ಬೇಕಾಗುತ್ತವೆ ಎಂಬುದನ್ನು ಊಹಿಸಿ. ಕಸ ಸಂಗ್ರಹಿಸಲು ಮೂರು-ನಾಲ್ಕು ವಿಭಿನ್ನ ಆಯ್ಕೆಗಳನ್ನು ಒದಗಿಸಲು ನಗರವು ಇಷ್ಟೊಂದು ವ್ಯವಸ್ಥೆಗಳನ್ನು ನಿರ್ವಹಿಸಬಹುದೇ? ಇದೆಲ್ಲವೂ ಏಕೆ? ನಿಮ್ಮ ಕಸವನ್ನು ಮನೆ ಬಾಗಿಲಿಗೆ ನೀಡಲು ನಿಮಗೆ ಸಾಧ್ಯವಾಗದ ಕಾರಣಕ್ಕಾಗಿಯೇ? ಇದಕ್ಕಿಂತ ಹೆಚ್ಚಿನ ಅನುಕೂಲವನ್ನು ನಾನು ಹೇಗೆ ಒದಗಿಸಲಿ?

Q

ವ್ಯವಸ್ಥಿತ ಬದಲಾವಣೆಗಳನ್ನು ಮಾಡದೆ ನಗರದ ವ್ಯಾಪ್ತಿಯನ್ನು ವಿಸ್ತರಿಸುವ ಅಪಾಯದ ಬಗ್ಗೆ ನೀವು ಮಾತನಾಡಿದ್ದೀರಿ. ಅದೇ ರೀತಿ, ಅಸ್ತಿತ್ವದಲ್ಲಿರುವ ರಸ್ತೆ ಮೂಲಸೌಕರ್ಯದಲ್ಲಿ ಮೊದಲು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಬಳಿಕವೇ ರಸ್ತೆ ಮೂಲಸೌಕರ್ಯವನ್ನು ವಿಸ್ತರಿಸಬೇಕಲ್ಲವೇ?

A

ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಪ್ರತಿಯೊಂದು ಜಾರಿ ಕ್ರಮವೂ ಪ್ರತಿರೋಧವನ್ನು ಎದುರಿಸುತ್ತದೆ. ನಮ್ಮ ಪ್ರಸ್ತುತ ರಸ್ತೆಗಳಲ್ಲಿ ಅರ್ಧದಷ್ಟು ಜಾಗವನ್ನು ನಿಲ್ಲಿಸಿರುವ ಕಾರುಗಳು ಆಕ್ರಮಿಸಿಕೊಂಡಿವೆ. ನಿಯಂತ್ರಣವಿಲ್ಲದ ಉಚಿತ ಪಾರ್ಕಿಂಗ್‌ನಿಂದ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಪಾರ್ಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸಿದರೆ ವಾಹನ ಸಂಚಾರ ಮತ್ತು ಪಾದಚಾರಿ ಸಂಚಾರ ಎರಡನ್ನೂ ಉತ್ತಮಗೊಳಿಸಬಹುದು. ರಸ್ತೆ ಸಾರ್ವಜನಿಕ ಸ್ಥಳ. ಅದು ಎಲ್ಲರಿಗೂ ಸೇರಿದ್ದು. ವಾಹನ ಹೊಂದಿರುವವರು ಮತ್ತು ವಾಹನ ಹೊಂದಿರದವರ ನಡುವೆ ರಸ್ತೆಯ ಬಳಕೆಯಲ್ಲಿ ಸಮಾನತೆ ತರಲು ನಾವು ಪ್ರಯತ್ನಿಸಿದಾಗಲೂ ಮತ್ತೆ ಪ್ರತಿರೋಧ ಎದುರಾಗುತ್ತದೆ.

20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ ಯಾವ ನಗರದಲ್ಲಿ ಪಾರ್ಕಿಂಗ್ ನೀತಿಯೇ ಇಲ್ಲ? ಇಷ್ಟೊಂದು ದೊಡ್ಡ ಜನಸಂಖ್ಯೆ ಹೊಂದಿರುವ ಯಾವ ನಗರದಲ್ಲಿ ಸಂಪೂರ್ಣ ಮುಕ್ತ ಪಾರ್ಕಿಂಗ್ ವ್ಯವಸ್ಥೆ ಮುಂದುವರಿದಿದೆ?

ಕೆಲವು ಜನರಲ್ಲಿ ತಮಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು, ತಮ್ಮ ಸವಲತ್ತುಗಳು ಯಾವುದೇ ರೀತಿಯಲ್ಲೂ ಕಡಿಮೆಯಾಗಬಾರದು ಎಂಬ ನಿರೀಕ್ಷೆಯಿದೆ. ನೀತಿ ರೂಪಿಸುವವರಾದ ನಾವು ಕೂಡ ಒಂದು ರೀತಿಯಲ್ಲಿ ಇಂತಹ ಸಂದೇಶವನ್ನು ನೀಡಿದ್ದೇವೆ.

ಪ್ರಸ್ತುತ ನಮ್ಮ ಬಳಿ ಪರಿಹಾರಗಳನ್ನು ಒಂದೊಂದಾಗಿ ಜಾರಿಗೊಳಿಸುವಷ್ಟು ಸಮಯವಿಲ್ಲ ಎಂದು ನಾನು ಭಾವಿಸುತ್ತೇನೆ. ಸಾಧ್ಯವಾದಷ್ಟು ಎಲ್ಲವನ್ನೂ ಸಮಾನಾಂತರವಾಗಿ ಮಾಡಬೇಕಿದೆ. ಸಂಚಾರ ನಿಯಮಗಳ ಜಾರಿ ವ್ಯವಸ್ಥೆ ಸುಧಾರಿಸಬೇಕು. ಅದೇ ಸಮಯದಲ್ಲಿ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯದ ಸಾಮರ್ಥ್ಯವನ್ನೂ ಹೆಚ್ಚಿಸಬೇಕು.

Q

ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಕಾರು ಮಾಲೀಕರು ಕಾನೂನು ಜಾರಿ ಕ್ರಮವನ್ನು ಸ್ವಾಗತಿಸಿದರು. ಆದರೆ ಪಾರ್ಕಿಂಗ್ ನಿಯಂತ್ರಣಕ್ಕೆ ಬಂದಾಗ ಅವರು ಅಸಮಾಧಾನ ವ್ಯಕ್ತಪಡಿಸಿದರು. ತಾವು ಆಸ್ತಿ ತೆರಿಗೆ ಪಾವತಿಸುತ್ತೇವೆ ಎಂಬುದು ಅವರ ವಾದ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ಆಸ್ತಿ ತೆರಿಗೆಯನ್ನು ಅವರು ತಮ್ಮ ಆಸ್ತಿಗಾಗಿ ಪಾವತಿಸುತ್ತಾರೆ, ರಸ್ತೆಗಳಿಗಾಗಿ ಅಲ್ಲ. ರಸ್ತೆಗಳು ಎಲ್ಲರಿಗೂ ಸೇರಿವೆ. ರಸ್ತೆಯ ಮೇಲಿನ ಮೊದಲ ಹಕ್ಕು ಸೂಕ್ಷ್ಮ ಸಂಚಾರ ವ್ಯವಸ್ಥೆಗಳಿಗೆ, ಅಂದರೆ ಪಾದಚಾರಿಗಳು, ಸೈಕಲ್ ಸವಾರರು ಸೇರಿದಂತೆ ವಾಹನಗಳಿಗಿಂತ ಕಡಿಮೆ ಸ್ಥಳ ಬಳಸುವ ಸಂಚಾರ ಬಳಕೆದಾರರಿಗೆ ಇರಬೇಕು.

Q

ನಗರದಲ್ಲಿ ಅಕ್ರಮ ನಿರ್ಮಾಣಗಳ ಬೆಳವಣಿಗೆ ನಿರಂತರವಾಗುತ್ತಿದೆ. ಇದನ್ನು ಹೇಗೆ ತಡೆಯಬಹುದು?

A

ಕಾನೂನು ಉಲ್ಲಂಘನೆಗಳನ್ನು ತಡೆಯಲು ಅನುಮೋದಿತ ನಕ್ಷೆ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಜನರು ಮತ್ತು ಮಾಧ್ಯಮಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದವು. ಇದು ಬ್ರಿಟಿಷರ ಕಾಲದ ಕಾನೂನಾಗಿತ್ತು. ಜನರಿಗೆ ಈ ಕಾನೂನು ಇಷ್ಟವಿಲ್ಲದಿದ್ದರೆ, ಕಾನೂನನ್ನು ಉದಾರೀಕರಣಗೊಳಿಸುವಂತೆ ಅವರು ಒತ್ತಾಯಿಸಬೇಕು. ಆದರೆ, ಅದರ ಬದಲು ಕಾನೂನನ್ನೇ ಉಲ್ಲಂಘಿಸುತ್ತಾರೆ. ಇದರಿಂದ ಅನಧಿಕೃತ ಬೆಳವಣಿಗೆಗೆ ಕಾರಣವಾಗುತ್ತದೆ.

Q

ಉತ್ತರ ಬೆಂಗಳೂರಿನಲ್ಲಿ ಭಾರೀ ಮಳೆಯಾದರೆ ಪೂರ್ವ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಇದರ ಜೊತೆಗೆ ರಾಜಕಾಲುವೆಗಳ ಮೇಲೆಯೇ ಅಕ್ರಮ ನಿರ್ಮಾಣಗಳು ನಡೆಯುತ್ತಿವೆ. ಇದನ್ನು ಹೇಗೆ ಪರಿಹರಿಸುತ್ತೀರಿ?

A

ಬೆಂಗಳೂರಿನ ಹೊರವಲಯದ ಬಹುತೇಕ ಬಡಾವಣೆಗಳಲ್ಲಿ ಪಟ್ಟಣ ಯೋಜನೆಯ ಕೊರತೆಯಿಂದಾಗಿ ಮಳೆನೀರು ಹೊರಹೋಗಲು ಸೂಕ್ತ ಮಾರ್ಗಗಳಿಲ್ಲ. ಭೂಪ್ರದೇಶದ ಇಳಿಜಾರಿಗೆ ಅನುಗುಣವಾಗಿ ನೀರು ಕೆಳಭಾಗಕ್ಕೆ ಹರಿಯುತ್ತದೆ. ಆದರೆ, ಈ ತಗ್ಗು ಪ್ರದೇಶಗಳಲ್ಲಿ ನೀರು ಹೊರಹೋಗಲು ಮಾರ್ಗಗಳಿಲ್ಲ. ಇದರಿಂದ ನೀರು ನಿಲ್ಲುತ್ತದೆ. ಇದು ಸ್ಥಳೀಯ ಮಟ್ಟದ ಸಮಸ್ಯೆ.

ಆದರೆ, ದೊಡ್ಡ ಸಮಸ್ಯೆಯೆಂದರೆ 260 ಕಿಲೋಮೀಟರ್ ಉದ್ದದ ರಾಜಕಾಲುವೆ ಜಾಲವನ್ನು ಮರುರೂಪಿಸಬೇಕಿದೆ. ಇಲ್ಲದಿರುವ ಸಂಪರ್ಕಗಳನ್ನು ಸರಿಪಡಿಸಬೇಕು. ಇದಕ್ಕಾಗಿ 2,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ.

Q

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನೀವು ನಿಮ್ಮ ಅಧೀನದಲ್ಲಿರುವ ಪ್ರತಿಯೊಂದು ವಿಭಾಗವನ್ನೂ ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ. ಸಾರ್ವಜನಿಕರಿಗೆ ನೀವು ಎಲ್ಲವನ್ನೂ ಒಬ್ಬರೇ ಮಾಡುತ್ತಿರುವಂತೆ ಕಾಣುತ್ತದೆ. ಇದು ಏಕಾಂಗಿ ಹೋರಾಟದಂತೆ ಅನಿಸುತ್ತದೆಯೇ?

A

ನಾನು ಹೊಂದಿರುವ ಆಲೋಚನೆ ಸರಳವಾಗಿದೆ. ನನಗೆ ಒಂದು ಕೆಲಸವಿದೆ. ಅದನ್ನು ನಾನು ಮಾಡಬೇಕು. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಕೆಲವು ದಿನಗಳಲ್ಲಿ ಪ್ರಗತಿ ಕಂಡುಬರುತ್ತದೆ. ಮತ್ತೆ ಕೆಲವು ದಿನಗಳಲ್ಲಿ ನಿರಾಶೆಯಾಗುತ್ತದೆ. ಆದರೆ ಮರುದಿನ ಬೆಳಗ್ಗೆ ಹೊಸ ಆರಂಭವಾಗುತ್ತದೆ.

ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ ಮಾಡುವ ವಿಧಾನವಿರುತ್ತದೆ. ನನ್ನ ವಿಧಾನ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ಆದರೆ ನನಗೆ ಕೆಲಸ ಮಾಡಲು ತಿಳಿದಿರುವ ರೀತಿ ಇದೇ. ಈ ಹಿಂದೆ ನನ್ನ ಜವಾಬ್ದಾರಿಯ ಕ್ಷೇತ್ರಗಳಲ್ಲಿ ಕೆಲವು ಸುಧಾರಣೆಗಳನ್ನು ತರಲು ನಮಗೆ ಸಾಧ್ಯವಾಗಿದೆ. ಹಿಂದೆ ಮಾಡಲು ಸಾಧ್ಯವಾಗಿದ್ದರೆ, ಈಗಲೂ ಕೆಲವು ಕೆಲಸಗಳನ್ನು ಮಾಡಲು ಸಾಧ್ಯವಾಗಬಹುದು ಎಂಬ ಆಶಯವಿದೆ.

Q

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹವು ಒಟ್ಟು ಆಸ್ತಿಗಳ ಸಂಖ್ಯೆಗೆ ಹೋಲಿಸಿದರೆ ಕಡಿಮೆಯಿದೆ. ತೆರಿಗೆ ಆದಾಯ ಹೆಚ್ಚಿಸಲು ಯಾವುದೇ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತದೆಯೇ?

A

ಬೆಂಗಳೂರಿನಲ್ಲಿ 35 ಲಕ್ಷ ಆಸ್ತಿಗಳಿವೆ. ಆದರೆ, ಕೇವಲ 25 ಲಕ್ಷ ಆಸ್ತಿಗಳಿಗೆ ಖಾತಾ ಇದೆ. ಆಸ್ತಿ ತೆರಿಗೆ ಪಾವತಿಸುತ್ತಿರುವವರು ಕೇವಲ 18 ಲಕ್ಷ. ಬೆಂಗಳೂರಿನಲ್ಲಿರುವ ಒಟ್ಟು ಆಸ್ತಿಗಳನ್ನು ಗುರುತಿಸಲು ತಂತ್ರಜ್ಞಾನ ಮತ್ತು ಕ್ಷೇತ್ರ ಸಿಬ್ಬಂದಿಯನ್ನು ಒಳಗೊಂಡ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ.

ಆಸ್ತಿಗಳನ್ನು ನಕ್ಷೆ ಮಾಡುತ್ತೇವೆ. ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಮೂಲಗಳಿಂದ ಮಾಹಿತಿಯನ್ನು ಪಡೆಯುತ್ತೇವೆ. ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಆಸ್ತಿಗಳನ್ನು ಗುರುತಿಸುತ್ತೇವೆ. ಬಳಿಕ ಅವುಗಳನ್ನು ಇ-ಖಾತಾಗಳೊಂದಿಗೆ ಹೊಂದಿಸಿ, ಎಷ್ಟು ಆಸ್ತಿಗಳಿಗೆ ಇ-ಖಾತಾ ಇದೆ ಮತ್ತು ಎಷ್ಟು ಆಸ್ತಿಗಳು ಆಸ್ತಿ ತೆರಿಗೆ ಪಾವತಿಸುತ್ತಿವೆ ಎಂಬುದನ್ನು ಪತ್ತೆಹಚ್ಚುತ್ತೇವೆ.

Q

ಭೂ ಖಾತ್ರಿ ಯೋಜನೆಯಿಂದ ರೂ.10,000 ಕೋಟಿ ಆದಾಯ ಸಂಗ್ರಹಿಸುವ ನಿರೀಕ್ಷೆ ಇತ್ತು. ಆದರೆ, ಇದುವರೆಗೆ ರೂ.300 ಕೋಟಿಗೂ ಹೆಚ್ಚು ಮಾತ್ರ ಸಂಗ್ರಹವಾಗಿದೆ. ರಿಯಾಯಿತಿ ಇದ್ದರೂ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಜನರು ಏಕೆ ಮುಂದೆ ಬರುತ್ತಿಲ್ಲ?

A

ಈ ಬಗ್ಗೆ ನಾನು ಜನರೊಂದಿಗೆ ಮಾತನಾಡಿಲ್ಲ. ಆದರೆ, ಜನರಲ್ಲಿ ಕಾನೂನುಬದ್ಧತೆಯ ಬಗ್ಗೆ ಒಂದು ರೀತಿಯ ಪ್ರಶ್ನಿಸುವ ಮನೋಭಾವ ಬೆಳೆದಿದೆ ಎಂದು ನನಗೆ ಅನಿಸುತ್ತದೆ. ಈ ಆಸ್ತಿಗಳಲ್ಲಿ ಹೆಚ್ಚಿನವು ಅಕ್ರಮವಾಗಿವೆ. ಅವುಗಳನ್ನು ಬಿ-ಅನಿಯಮಿತ ಸ್ಥಿತಿಯಿಂದ ಎ-ನಿಯಮಿತ ಮತ್ತು ಕಾನೂನುಬದ್ಧ ಸ್ಥಿತಿಗೆ ಪರಿವರ್ತಿಸಲು ನಾವು ಮಾರ್ಗ ಒದಗಿಸಿದ್ದೇವೆ. ಆದರೂ ಜನರು ಮುಂದೆ ಬರಲು ನಿರಾಕರಿಸುತ್ತಿದ್ದಾರೆ. ನಿಯಮಿತಗೊಳಿಸುವ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಸಿದ್ದರೂ ಕೇವಲ 75,000 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.

Q

ಜಿಬಿಎ ಫುಟ್‌ಪಾತ್ ಒತ್ತುವರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ, ಪ್ರಭಾವಿ ಬಿಲ್ಡರ್‌ಗಳು ಸೇರಿದಂತೆ ಅಕ್ರಮ ನಿರ್ಮಾಣಗಳ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಇದನ್ನು ಜಿಬಿಎ ಹೇಗೆ ಪರಿಹರಿಸಲಿದೆ?

A

ಬೆಂಗಳೂರಿನ ಸುಮಾರು ಶೇ.80ರಷ್ಟು ಕಟ್ಟಡಗಳಲ್ಲಿ ಯಾವುದಾದರೂ ಒಂದು ರೀತಿಯ ನಿಯಮ ಉಲ್ಲಂಘನೆ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಜಾರಿ ಕ್ರಮ ಕೈಗೊಳ್ಳುವುದು ಸವಾಲಿನ ಕೆಲಸ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೊಳಿಸಿ, ಕಟ್ಟಡ ನಿರ್ಮಾಣದ ಯೋಜನಾ ನಿಯಮಗಳನ್ನು ಅನುಷ್ಠಾನಗೊಳಿಸುವ ಧೈರ್ಯಶಾಲಿ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ದೊಡ್ಡ ನಿರ್ಮಾಣ ಸಂಸ್ಥೆಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಮನೆ ಮಾಲೀಕರು ಅನುಮತಿಸಲಾದ ಮಿತಿಗಿಂತ ಹೆಚ್ಚಿನ ನಿರ್ಮಾಣ ಮಾಡುತ್ತಾರೆ. ಇದು ಹೆಚ್ಚಿನ ಉಲ್ಲಂಘನೆಗಳಿಗೆ ಕಾರಣವಾಗಿದೆ. ದುರಾಡಳಿತ ಮತ್ತು ಭ್ರಷ್ಟಾಚಾರ ಪ್ರಮುಖ ಸಮಸ್ಯೆಗಳಾಗಿವೆ. ವೈಯಕ್ತಿಕ ಆಸ್ತಿ ಮಾಲೀಕರಿಂದ ಲಂಚ ಪಡೆದ ಅಧಿಕಾರಿಗಳು ಕೆಲವೊಮ್ಮೆ ಕಾನೂನು ಉಲ್ಲಂಘನೆಗಳನ್ನು ಕಂಡೂ ಕಾಣದಂತೆ ವರ್ತಿಸಬಹುದು. ಆದರೆ, ವಿರೋಧದ ನಡುವೆಯೂ ಜಾರಿ ಕ್ರಮ ಮುಂದುವರಿಯಲಿದೆ.

Q

ಬೆಂಗಳೂರಿನ ದಟ್ಟಣೆ ಮತ್ತು ಸಂಕೀರ್ಣ ಪ್ರದೇಶಗಳನ್ನು ಗಮನಿಸಿದರೆ, ಮಾದರಿ ನಗರ ನಿರ್ಮಿಸುವ ನಿಮ್ಮ ದೃಷ್ಟಿಕೋನ ಎಷ್ಟು ವಾಸ್ತವಿಕ? ನೀವು ಎಷ್ಟು ಸಾಧಿಸಬಹುದು?

A

ನಾನು ಸವಾಲುಗಳನ್ನು ಮಾತ್ರ ವಿವರಿಸುತ್ತಿದ್ದೇನೆ. ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿಲ್ಲ. ನಗರವನ್ನು ಸುಧಾರಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡಲಿದೆ. ಕೆಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವುದು ಕಷ್ಟವಾಗಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಬಹುತೇಕ ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗೆ ಅವಕಾಶವಿದೆ.

ವ್ಯಾಪಕ ಒಮ್ಮತ ಇರುವ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಮಾಡಲು ಸಾಧ್ಯ. ಒಮ್ಮತ ಮೂಡಬಹುದಾದ ಕ್ಷೇತ್ರಗಳನ್ನು ಗುರುತಿಸಿ, ಸಾಧ್ಯವಾದಷ್ಟು ಸುಧಾರಣೆಗಳನ್ನು ತರಲು ಗಮನ ಹರಿಸಲಾಗುವುದು.

Q

ಬಿಎಂಎಲ್‌ಟಿಎ ಕಾಯ್ದೆಯ ಸೆಕ್ಷನ್ 19ಕ್ಕೆ ಮಾಡಲಾದ ತಿದ್ದುಪಡಿ ಬಗ್ಗೆ ಆತಂಕವಿದೆ. ವಿಶೇಷವಾಗಿ ಮಾರ್ಗಸೂಚಿಗಳ ಕೊರತೆ ಮತ್ತು ಅವು ಯಾವಾಗ ಜಾರಿಯಾಗುತ್ತವೆ ಎಂಬ ಅನಿಶ್ಚಿತತೆ ಇದೆ. ನಿಮ್ಮ ಪ್ರತಿಕ್ರಿಯೆ ಏನು?

A

ಬಿಎಂಎಲ್‌ಟಿಎ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕಿದೆ. ಇದರಲ್ಲಿ ನಿಯಮಗಳನ್ನು ರೂಪಿಸುವುದು ಮತ್ತು ಸಮಿತಿಗಳನ್ನು ರಚಿಸುವುದೂ ಸೇರಿದೆ. ಆದರೆ, ಈ ವ್ಯವಸ್ಥೆಗಳು ರೂಪುಗೊಳ್ಳುವವರೆಗೆ ದಿನನಿತ್ಯದ ನಿರ್ಧಾರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ವಿಳಂಬವಾದರೆ ಬೆಂಗಳೂರಿನ ಮೇಲೆ ಅದರ ಪರಿಣಾಮ ಸರಪಳಿ ರೀತಿಯಲ್ಲಿ ಮುಂದುವರಿಯಬಹುದು.

ಈ ನಿಬಂಧನೆ ಅಗತ್ಯ ವ್ಯವಸ್ಥೆಗಳು ರೂಪುಗೊಳ್ಳುವವರೆಗೆ ಮಾತ್ರ ಇರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಮಾರ್ಗಸೂಚಿಗಳ ರಚನೆಯನ್ನು ತ್ವರಿತಗೊಳಿಸಬಹುದು ಮತ್ತು ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಎಂದು ಹೇಳಿದ್ದಾರೆ.

X
Kannada Prabha
www.kannadaprabha.com