ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ!

ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜುಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣ ವ್ಯವಸ್ಥೆಯಿತ್ತು. ನಾನು ಶೂದ್ರಕ್ಕೆ ಸೇರಿದವನು ಎಂದು ಸಿದ್ದರಾಮಯ್ಯ ಹೇಳಿದರು.
Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಮತ್ತು ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಯಿಂದ ಮಾತ್ರ ಹಿಂದೆ ಸರಿದಿದ್ದೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ರವಾನಿಸಿದರು

ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜುಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣ ವ್ಯವಸ್ಥೆಯಿತ್ತು. ನಾನು ಶೂದ್ರಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಕೂಡ ಶೂದ್ರರೆ. ವರ್ಣ ವ್ಯವಸ್ಥೆಯಲ್ಲಿ ಮೇಲಿನ ಮೂರು ಜಾತಿಗಳಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ. ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೆ ಈ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಗಲು ಸಾಧ್ಯವಾಗುತ್ತಿರಲಿಲ್ಲ. ಶೂದ್ರ ವರ್ಗದ ಜನರು ಅಕ್ಷರ ಸಂಸ್ಕೃತಿಯಿಂದ, ಅವಕಾಶಗಳಿಂದ ವಂಚಿತರಾಗುತ್ತಿರಲಿಲ್ಲ ಎಂದರು.

ವಿದ್ಯಾರ್ಥಿ ದೆಸೆಯಿಂದಲೂ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ನಾನು ಬಹಳ ಕಷ್ಟಪಟ್ಟು ಓದಿ, ಕಾನೂನು ಪದವಿಯನ್ನು ಪಡೆದುಕೊಂಡು, ನಂತರ ರಾಜಕಾರಣಿಯಾಗಿ ಹಿಂದುಳಿದ ಜಾತಿಗಳು, ಶೋಷಿತ ವರ್ಗಗಳು ಹೀಗೆ ಯಾರ್ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರ ಪರವಾಗಿ ಹೋರಾಟ ನಡೆಸಿದೆ. ಸಾಮಾಜಿಕ ನ್ಯಾಯ ಸಿಗಬೇಕು, ಯಾರೊಬ್ಬರೂ ದೌರ್ಜನ್ಯಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ, ಮುಂದೆಯೂ ಕೂಡ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಚುನಾವಣೆಯಲ್ಲಿ ಹಣ ಹಾಕಿ ಗೆಲ್ಲಬೇಕಾದರೆ ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಕಾರಣದಿಂದ ಹೊರತು ಬೇರೆ ಯಾವುದೇ ಕಾರಣದಿಂದ ನಾನು ಹಿಂದೆ ಸರಿದಿರುವುದಲ್ಲ. ನಿಮಗೆ ನ್ಯಾಯ ಸಿಗುವವರೆಗೆ, ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಸಂವಿಧಾನ ಬಂದು 76 ವರ್ಷಗಳಾಯಿತು. ಆದರೆ ಇನ್ನೂ ಎಲ್ಲರಿಗೂ ಸಮಾನ ಅವಕಾಶ ದೊರಕಿಲ್ಲ, ಜೊತೆಗೆ ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ನಿಮ್ಮ ಹೋರಾಟ ಇರಲೇಬೇಕು. ಸಾವಿರಾರು ವರ್ಷಗಳಿಂದ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಅಲಿಖಿತ ಸಂವಿಧಾನ. ಅದರ ಪ್ರಕಾರವೇ ಜಾತಿಗಳನ್ನು ಒಡೆದು, ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಪಟ್ಟಭದ್ರರು ತಮ್ಮ ಬೆಳೆಕಾಳು ಬೇಯಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿ ಇಂದು ಅಸಮಾನತೆ ನಿರ್ಮಾಣವಾಗಿದೆ. ಇಷ್ಟು ವರ್ಷಗಳಾಗಿದ್ದರೂ ಇನ್ನೂ ಕೂಡ ಅಸಮಾನತೆ ಹೋಗಿಲ್ಲ. ಈ ದೇಶದಲ್ಲಿ ಒಂದು ದಿನ ಸಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.

Siddaramaiah
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಶೇ.75ರಷ್ಟು ಮೀಸಲಾತಿ ನೀಡಿ: ಸಿದ್ದರಾಮಯ್ಯ; Video

ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಎಲ್ಲಿಯವರೆಗೆ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲೇಬೇಕು. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್, ಡಾ.ಅಜಯಸಿಂಗ್, ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಮತ್ತಿತರೆ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com