ಬೆಂಗಳೂರು ಸ್ವಚ್ಛತೆಗೆ ತಟ್ಟಿದ ಸಿಬ್ಬಂದಿ ಅಭಾವ: GBA ಬಂದರೂ ನೀಗದ 3,000 ಪೌರಕಾರ್ಮಿಕರ ಕೊರತೆ..!

ಉಪಮುಖ್ಯಮಂತ್ರಿಯಾಗಿದ್ದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಸ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ, ಆದರೆ, ಕಸದ ಮಾಫಿಯಾ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದರು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾದ ನಂತರವೂ ಸಿಲಿಕಾನ್ ಸಿಟಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದ್ದು, ನಗರಕ್ಕೆ ಕನಿಷ್ಠ 3,000 ಪೌರಕಾರ್ಮಿಕರ ಕೊರತೆ ಎದುರಾಗಿದೆ.

ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೊರಮಾವು ವಾರ್ಡ್‌ಗೆ ಮುಂಜಾನೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು ಶೇ. 30 ರಷ್ಟು ಪೌರಕಾರ್ಮಿಕರು ಗೈರುಹಾಜರಾಗಿರುವುದನ್ನು ಕಂಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲೇ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಸುಮಾರು 15,000 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರೂ ಬೆಂಗಳೂರಿಗೆ ಇನ್ನೂ ಕನಿಷ್ಠ 3,000 ಪೌರಕಾರ್ಮಿಕರ ಅಗತ್ಯವಿದೆ ಎಂದು ಗ್ರೇಟರ್ ಬೆಂಗಳೂರು ಪೌರಕಾರ್ಮಿಕರ ಸಂಘ (GBPA) ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ತಿಳಿಸಿವೆ.

ಉಪಮುಖ್ಯಮಂತ್ರಿಯಾಗಿದ್ದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಸ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ, ಆದರೆ, ಕಸದ ಮಾಫಿಯಾ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದರು. ಆದರೆ, ಪೌರಕಾರ್ಮಿಕರ ಸಂಖ್ಯೆಯನ್ನು ಸುಳ್ಳಾಗಿ ತೋರಿಸಿ, ನಕಲಿ ಹಾಜರಾತಿ ದಾಖಲಿಸುವ ಮೂಲಕ ವೇತನ ಪಡೆಯುತ್ತಿರುವ ವ್ಯವಸ್ಥೆಯೂ ಇದೆ ಎಂಬ ಆರೋಪಗಳು ಕೇಳಿಬಂದಿವೆ.

ಇದಲ್ಲದೆ, ಪ್ರತಿಯೊಂದು ವಾರ್ಡ್‌ನಲ್ಲೂ ಅಸ್ತಿತ್ವದಲ್ಲೇ ಇಲ್ಲದ ವಾಹನಗಳು ಹಾಗೂ ಕಸ ಸಂಗ್ರಹಿಸುವ ಕಾಂಪ್ಯಾಕ್ಟರ್‌ಗಳನ್ನು ತೋರಿಸಿ ತೆರಿಗೆದಾರರ ಹಣ ವ್ಯಯಿಸಲಾಗುತ್ತಿದೆ. ಇಂತಹ ವ್ಯವಸ್ಥೆಗಳು ಹಲವು ದಶಕಗಳಿಂದ ಮುಂದುವರಿದಿವೆ.

ಹೀಗಾಗಿ ಬೈರೇಗೌಡ ಅವರು ಒಂದು ವಾರ್ಡ್‌ನಲ್ಲಿ ಶೇ.30ರಷ್ಟು ಪೌರಕಾರ್ಮಿಕರು ಗೈರುಹಾಜರಾಗಿರುವುದನ್ನು ಕಂಡಿರುವುದು ಅಚ್ಚರಿಯ ವಿಚಾರವಲ್ಲ ಎಂದು ಸಿಐವಿಐಸಿ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಹೇಳಿದ್ದಾರೆ.

File photo
ನೂತನ ಪಾಲಿಕೆಗಳಿಗೆ 6,500 ಸಿಬ್ಬಂದಿಗಳ ನೇಮಕ: ಆರ್ಥಿಕ ಹೊರೆ ಎಂದ ಸರ್ಕಾರ; ಮರು ಪರಿಶೀಲನೆಗೆ GBA ಮುಂದು..!

ಹಾಜರಾತಿ ಪಟ್ಟಿಯಲ್ಲಿ ನಕಲಿ ನಮೂದು ಮಾಡುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸುವ ಬದಲು, ನಿಜವಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಪೌರಕಾರ್ಮಿಕರನ್ನು ಸಚಿವರು ಪ್ರಶ್ನಿಸಿರುವುದು ಬೇಸರದ ಸಂಗತಿ. ಅವರು ಕಾಯಂ ಉದ್ಯೋಗ ಕೇಳುವ ಹಕ್ಕಿನ ಬಗ್ಗೆಯೂ ಪ್ರಶ್ನಿಸಿದ್ದಾರೆ. ಹಿಂದೆ ಪೌರಕಾರ್ಮಿಕರನ್ನು ಗುತ್ತಿಗೆದಾರರು ತೀವ್ರವಾಗಿ ಶೋಷಿಸುತ್ತಿದ್ದರು.

ಅದಕ್ಕಾಗಿಯೇ ಅವರನ್ನು ಗುತ್ತಿಗೆ ವ್ಯವಸ್ಥೆಯಿಂದ ಮುಕ್ತಗೊಳಿಸಿ, ನೇರವಾಗಿ ಪಾಲಿಕೆಯ ವ್ಯಾಪ್ತಿಗೆ ತಂದು ಕಾಯಂ ನೌಕರರನ್ನಾಗಿ ಮಾಡಲಾಯಿತು. ಆದರೆ, ಇದರಿಂದ ನಕಲಿ ಹಾಜರಾತಿ ಕಡಿಮೆಯಾಗಿರುವುದಾಗಲಿ, ಅವರ ಕೆಲಸದ ಪರಿಸ್ಥಿತಿ ಸುಧಾರಿಸಿರುವುದಾಗಲಿ ಕಾಣುತ್ತಿಲ್ಲ.

ಸ್ಥಳೀಯ ನಾಗರಿಕರ ಭಾಗವಹಿಸುವಿಕೆಯೊಂದಿಗೆ ವಾರ್ಡ್ ಸಮಿತಿಗಳು ಕಾರ್ಯನಿರ್ವಹಿಸಿದ್ದರೆ, ಹಾಜರಾತಿ ದಾಖಲೆಗಳ ನೈಜತೆ, ತೋರಿಸಲಾಗಿರುವ ಟೆಂಪೋಗಳು ಮತ್ತು ಕಾಂಪ್ಯಾಕ್ಟರ್‌ಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ ಎಂಬುದನ್ನು ಪರಿಶೀಲಿಸಬಹುದಿತ್ತು. ಇದರಿಂದ ಮಾಫಿಯಾದ ಹಿಡಿತವೂ ಸಡಿಲವಾಗುತ್ತಿತ್ತು ಎಂದು ಹೇಳಿದರು.

ಹೊರಮಾವು ವಾರ್ಡ್‌ನಲ್ಲಿ 25 ಪೌರಕಾರ್ಮಿಕರ ಪೈಕಿ 13 ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಸಚಿವರು ಅಸಮಾಧಾನಗೊಂಡಿದ್ದಾರೆ. ಆದರೆಸ ಅದಕ್ಕಾಗಿ ಕಾರ್ಮಿಕರನ್ನು ಕೂಗಾಡುವುದು ಸರಿಯಲ್ಲ. ಬದಲಿಗೆ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಜಿಬಿಪಿಎ ಅಧ್ಯಕ್ಷ ಮುತ್ತ್ಯಾಲಪ್ಪ ಹೇಳಿದ್ದಾರೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಹಿರಿಯ ಪರಿಸರ ವಿಭಾಗದ ಎಂಜಿನಿಯರ್‌ಗಳ ಪ್ರಕಾರ, 10 ವರ್ಷಗಳ ಹಿಂದೆ ನಗರದಲ್ಲಿ 32,000 ಪೌರಕಾರ್ಮಿಕರು ಇದ್ದರು. ಆಗ ಏಜೆನ್ಸಿಗಳ ಮೇಲ್ವಿಚಾರಕರು ಸುಳ್ಳು ಸಂಖ್ಯೆಯನ್ನು ನೀಡುತ್ತಿದ್ದರು. 2016ರಲ್ಲಿ ಜೈವಿಕ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪೌರಕಾರ್ಮಿಕರ ಸಂಖ್ಯೆ 32,000ರಿಂದ 18,000ಕ್ಕೆ ಇಳಿಯಿತು. ಸಾವು ಹಾಗೂ ನಿವೃತ್ತಿಯ ಕಾರಣದಿಂದ ಇದೀಗ ಈ ಸಂಖ್ಯೆ ಸುಮಾರು 15,000ಕ್ಕೆ ಕುಸಿದಿದೆ.

File photo
ಕುಸಿಯುವ ಅಪಾಯದಲ್ಲಿರುವ ಶಿಥಿಲಗೊಂಡ ಕಟ್ಟಡಗಳನ್ನು ಕೆಡವಲು ಜಿಬಿಎ ಮುಖ್ಯ ಆಯುಕ್ತ ಆದೇಶ

ನೇರ ಪಾವತಿ ವ್ಯವಸ್ಥೆಯಡಿ ಪೌರಕಾರ್ಮಿಕರಿಗೆ ತಿಂಗಳಿಗೆ ರೂ.27,000 ವೇತನ ನೀಡಲಾಗುತ್ತಿದೆ. ಅವರಿಗೆ ಇಎಸ್‌ಐ, ಪಿಎಫ್ ಹಾಗೂ ಆರೋಗ್ಯ ವಿಮೆ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. 2025ರ ಮೇ ತಿಂಗಳಲ್ಲಿ ಸರ್ಕಾರ 12,692 ಪೌರಕಾರ್ಮಿಕರನ್ನು ಕಾಯಂಗೊಳಿಸಿತ್ತು. ಇದರಿಂದ ಅವರ ಒಟ್ಟು ವೇತನ ರೂ.39,000ಕ್ಕೆ ಏರಿಕೆಯಾಗಿದೆ.

“2000ನೇ ಇಸವಿಯಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 4,000 ಪೌರಕಾರ್ಮಿಕರನ್ನು ಮಾತ್ರ ಈ ಹಿಂದೆ ಕಾಯಂ ನೌಕರರೆಂದು ಗುರುತಿಸಲಾಗಿತ್ತು. ದಾಖಲೆಗಳು, ದೈಹಿಕ ಸಾಮರ್ಥ್ಯದ ಪ್ರಮಾಣಪತ್ರ ಹಾಗೂ ವಯಸ್ಸಿನ ಪರಿಶೀಲನೆಯ ಬಳಿಕ 9,000 ಮಂದಿಗೆ ಕಾಯಂ ಸ್ಥಾನಮಾನ ನೀಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಗಳು ಹಾಗೂ ಅಪಘಾತಗಳಿಂದಾಗಿ 900ಕ್ಕೂ ಹೆಚ್ಚು ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಕೆಲಸ ಮಾಡುತ್ತಿರುವವರಲ್ಲಿ ಅನೇಕರು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಇನ್ನು ಕೆಲವರು ಕಾಯಂ ಸ್ಥಾನಮಾನ ಪಡೆಯಲು ಅಗತ್ಯವಿರುವ ಕನಿಷ್ಠ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸದ ಕಾರಣ ಅರ್ಹರಾಗಿಲ್ಲ.

ಜಿಬಿಎ ಅಡಿಯಲ್ಲಿ ಐದು ಪಾಲಿಕೆಗಳನ್ನು ರಚಿಸಿದ ಬಳಿಕ ಪೌರಕಾರ್ಮಿಕರನ್ನು ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ ನಗರದಲ್ಲಿ ಪೌರಕಾರ್ಮಿಕರ ಕೊರತೆ ಇನ್ನೂ ಇದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ 700 ಜನರಿಗೆ ಒಬ್ಬ ಪೌರಕಾರ್ಮಿಕರನ್ನು ಕಸ ವಿಲೇವಾರಿಗೆ ನಿಯೋಜಿಸಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಕೊರತೆಯನ್ನು ನೀಗಿಸಲು ಇನ್ನೂ ಸುಮಾರು 3,000 ಪೌರಕಾರ್ಮಿಕರನ್ನು ನೇಮಕ ಮಾಡಬೇಕಿದೆ. ಪಾಲಿಕೆಯ ಕರ್ತವ್ಯಕ್ಕೆ ಹಾಜರಾಗದೆ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಶೇ.90ರಷ್ಟು ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಶೇ.10ರಷ್ಟು ಮಂದಿ ಕರ್ತವ್ಯ ಲೋಪ ಎಸಗುವುದರಿಂದ ಇಡೀ ನಗರದ ಪೌರಕಾರ್ಮಿಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com