

ಬೆಂಗಳೂರು: ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಗುದ್ದಾಟ ಮತ್ತೊಂದು ಮಜಲಿಗೆ ತಲುಪಿದ್ದೆ. ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಮಾರ್ಗಸೂಚಿಗೆ ಬದಲಾಗಿ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನದೇ ಆದ ನೂತನ ನಿಯಮವನ್ನು ಜಾರಿಗೆ ತಂದಿದ್ದು, ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನು ಮಾತ್ರವೇ ಹಾಡಲು ಡಿಕೆ ಶಿವಕುಮಾರ್ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
"ಭಾರತದ ಸ್ವಾತಂತ್ರ್ಯ ಚಳವಳಿಯ ವೇಳೆ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿ ಮೂಡಿಸಲು ವಂದೇ ಮಾತರಂ ಪ್ರಮುಖ ಪಾತ್ರ ವಹಿಸಿತ್ತು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಂದೇ ಮಾತರಂ ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಹಾಗೂ ಅದರ ಗಾಯನ/ವಾದನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆ ಮಾರ್ಗಸೂಚಿಗಳಲ್ಲಿ ವಾದನ ಮತ್ತು ಸಾಮೂಹಿಕ ಗಾಯನಕ್ಕೆ ಪ್ರತ್ಯೇಕ ಸಂದರ್ಭಗಳನ್ನು ನಿರ್ದಿಷ್ಟಪಡಿಸಲಾಗಿತ್ತು.
ಆದರೆ, ರಾಜ್ಯದಲ್ಲಿ ನಡೆಯುವ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಸ್ವರೂಪ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ರಾಷ್ಟ್ರೀಯ ಗೀತೆಯ ವಾದನ/ಗಾಯನದಲ್ಲಿ ಏಕರೂಪತೆ, ಗೌರವ ಮತ್ತು ಸೂಕ್ತ ಶಿಷ್ಟಾಚಾರ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯ ಸರ್ಕಾರಿ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು" ಎಂದು ನಿರ್ದೇಶನ ನೀಡಲಾಗಿದೆ.
ಮುಂಡುವರೆದು, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಾಜ್ಯಪಾಲರು ಭಾಗವಹಿಸುವ ಅಧಿಕೃತ ಕಾರ್ಯಕ್ರಮಗಳಲ್ಲಿ ಜೊತೆಗೆ ಮತ್ತು ಕೇಂದ್ರ ಸರ್ಕಾರದ ಪ್ರಾತಿನಿಧ್ಯದ ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರದ ನಿಯಮದ ಅನ್ವಯ ಎಲ್ಲಾ 6 ಚರಣಗಳನ್ನು ಹಾಡಲು ಸೂಚಿಸಲಾಗಿದೆ.
ವಿವಾದ ಹಿನ್ನೆಲೆ ಏನು?
ಕೇಂದ್ರ ಸರ್ಕಾರವು ಇತ್ತೀಚೆಗೆ ರಾಷ್ಟ್ರದ ಗೌರವಕ್ಕೆ ಅಪಮಾನ ತಡೆ ಕಾಯ್ದೆಗೆ ತಿದ್ದುಪಡಿ ತಂದು, ರಾಷ್ಟ್ರಗೀತೆ ಜನಗಣಮನಕ್ಕೆ ನೀಡಲಾಗಿರುವ ಸಮಾನ ಗೌರವ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ವಂದೇ ಮಾತರಂ ಗೀತೆಗೂ ವಿಸ್ತರಿಸಿತ್ತು. ಆದರೆ, 1937ರ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಸುದೀರ್ಘ ರಾಜಕೀಯ ನಿಲುವಿಗೆ ಬದ್ಧವಾಗಿ, ಕೋಮು ಸೌಹಾರ್ದತೆ ಹಾಗೂ ಕಾರ್ಯಕ್ರಮಗಳ ಏಕರೂಪತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.