

ಬೆಂಗಳೂರು: ಪರಿಸರ ಸ್ನೇಹಿ ಜೇಡಿಮಣ್ಣಿನ ಮೂರ್ತಿಗಳನ್ನು ಪೂಜಿಸುವ ಮೂಲಕ ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ಪ್ರಕೃತಿಗೆ ಪೂರಕವಾಗಿ ಆಚರಿಸೋಣ ಎಂದು ಪರಿಸರ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಲಾಲ್ ಬಾಗ್ ನ ಪಶ್ಚಿಮ ದ್ವಾರದಲ್ಲಿ ಮಣ್ಣಿನ ಮೂರ್ತಿಗಳನ್ನು ಸಾರ್ವಜನಿಕವಾಗಿ ಉಚಿತವಾಗಿ ವಿತರಿಸಿ ಮಾತನಾಡಿದ ಸಚಿವರು, ಸಂಪ್ರದಾಯ ಮತ್ತು ಭಕ್ತಿಭಾವದಿಂದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು ಎಂದರು.
ಜಲಮೂಲಗಳಿಗೆ ಮಾಲಿನ್ಯ ಉಂಟುಮಾಡುವ ವಸ್ತುಗಳನ್ನು ಬಳಸದೆ, ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸುವಂತೆ ಸಚಿವರು ಕರೆ ನೀಡಿದರು.
ಅವೆನ್ಯೂ ರಸ್ತೆಯ ಆರ್ಯ ವೈಷ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಬಾರಿಯೂ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ವಿತರಿಸಲಾಯಿತು. ಈ ವರ್ಷ ಸುಮಾರು 251 ಮಣ್ಣಿನ ಮೂರ್ತಿಗಳನ್ನು ವಿತರಣೆ ಮಾಡಲಾಯಿತು
ಪರಿಸರ ಸ್ನೇಹಿ ಗಣೇಶ ಹಾಗೂ ಗೌರಿ ವಿಗ್ರಹಗಳನ್ನು ವಿತರಿಸುವ ಜೊತೆಗೆ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಾಸವಿ ಯುವ ಜನ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ತಿಳಿಸಿದರು.