ಇ-ಸ್ವತ್ತು ಬಾಕಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಹೊಸ ಅಭಿಯಾನ..!

ದಾಖಲೆಗಳು ಸಂಪೂರ್ಣವಾಗಿಲ್ಲದಿದ್ದರೂ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಆಸ್ತಿ ದಾಖಲೆಗಳನ್ನು ಪಡೆಯಲು ಸಾಧ್ಯವಾಗದಿರುವ ಸಮಸ್ಯೆಯೂ ಇದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಾದ್ಯಂತ ಬಹುಕಾಲದಿಂದ ಬಾಕಿ ಉಳಿದಿರುವ ಇ-ಸ್ವತ್ತು ಅರ್ಜಿಗಳನ್ನು ವಿಲೇವಾರಿ ಮಾಡಲು ಸಚಿವ ಈಶ್ವರ ಬಿ. ಖಂಡ್ರೆ ಅವರು ಹೊಸ ಕ್ರಮಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳುಗಳು, ಕೆಲವೊಮ್ಮೆ ವರ್ಷಗಳ ಹಿಂದೆಯೇ ಇ-ಸ್ವತ್ತು ಅರ್ಜಿಗಳನ್ನು ಸಲ್ಲಿಸಿದ್ದ ಸಾವಿರಾರು ಗ್ರಾಮೀಣ ಆಸ್ತಿ ಮಾಲೀಕರು ತಾಂತ್ರಿಕ ದೋಷಗಳಿಂದಾಗಿ ವಿಳಂಬ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದಾಖಲೆಗಳು ಸಂಪೂರ್ಣವಾಗಿಲ್ಲದಿದ್ದರೂ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಆಸ್ತಿ ದಾಖಲೆಗಳನ್ನು ಪಡೆಯಲು ಸಾಧ್ಯವಾಗದಿರುವ ಸಮಸ್ಯೆಯೂ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪಂಚಾಯತ್‌ ಸದಸ್ಯರ ಸಮಿತಿಯನ್ನು ರಚಿಸಿದೆ.

ಪರಿಷ್ಕೃತ ಇ-ಸ್ವತ್ತು 3.0 ವ್ಯವಸ್ಥೆಯಡಿ ಪರಿಶೀಲನೆ ಪೂರ್ಣಗೊಂಡಿರುವ ಗ್ರಾಮೀಣ ಆಸ್ತಿ ಮಾಲೀಕರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸರ್ಕಾರ ಉದ್ದೇಶಿಸಿದೆ. ದಾಖಲೆಗಳಿಲ್ಲದ ಆಸ್ತಿಗಳ ಮಾಲೀಕರಿಗಾಗಿ ಪ್ರತ್ಯೇಕ ದಾಖಲೀಕರಣ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದ್ದು, ವಿದ್ಯುತ್‌ ಬಿಲ್‌, ತೆರಿಗೆ ಪಾವತಿ ರಸೀದಿ, ಪಡಿತರ ಚೀಟಿ, ನಿವಾಸದ ದಾಖಲೆ, ಮತದಾರರ ಗುರುತಿನ ಚೀಟಿ ಹಾಗೂ ನೋಟರಿ ಮಾಡಿಸಿದ ಸ್ವಯಂ ಘೋಷಣಾ ಪ್ರಮಾಣಪತ್ರವನ್ನು ಪರಿಗಣಿಸಲಾಗುತ್ತದೆ.

File photo
ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ 'ಇ-ಸ್ವತ್ತು: ಮುಂದಿನ ತಿಂಗಳಿಂದ 'ಮನೆ ಮನೆಗೆ ಅಭಿಯಾನ ಆರಂಭ!

ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ. ಅಕ್ಟೋಬರ್‌ 2ರಿಂದ ಜಿಲ್ಲಾಮಟ್ಟದ ಪರಿಶೀಲನೆ ಆರಂಭವಾಗಲಿದ್ದು, ನವೆಂಬರ್‌ 1ರ ಕರ್ನಾಟಕ ರಾಜ್ಯೋತ್ಸವದಂದು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

4,000 ಚದರ ಅಡಿವರೆಗೆ ಇರುವ ಮನೆಗಳು ಮತ್ತು ನಿವೇಶನಗಳು ಸೇರಿದಂತೆ ಆಸ್ತಿಗಳನ್ನು ಈ ಪ್ರಕ್ರಿಯೆಯಡಿ ಪರಿಗಣಿಸಲಾಗುತ್ತದೆ. ಅರ್ಜಿದಾರರು ನಿಜವಾದ ನಿವಾಸಿ ಹಾಗೂ ಆಸ್ತಿ ಮಾಲೀಕರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರಾಮವಾರು ಗ್ರಾಮಸಭೆಗಳನ್ನು ನಡೆಸಲಾಗುತ್ತದೆ. ಬಳಿಕ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆಕ್ಷೇಪಣೆಗಳ ಪರಿಶೀಲನೆಯ ನಂತರ ಅನುಮೋದನೆಗಳನ್ನು ಅಂತಿಮಗೊಳಿಸಲಾಗುತ್ತದೆ.

ಸರ್ಕಾರಿ ಜಮೀನು, ಅರಣ್ಯ ಭೂಮಿ ಹಾಗೂ ಬಿ-ಖರಾಬ್‌ (ಮೌಲ್ಯಮಾಪನಗೊಳ್ಳದ/ಕಂದಾಯ ಬಂಜರು) ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳು ಅರ್ಹವಾಗುವುದಿಲ್ಲ. ಇಂತಹ ಜಮೀನುಗಳಲ್ಲಿರುವ ಅಕ್ರಮ ಕಟ್ಟಡಗಳನ್ನು ಪ್ರತ್ಯೇಕ ನಿಯಮಗಳಡಿ ಸಕ್ರಮಗೊಳಿಸದಿದ್ದರೆ ತೆರವುಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com